Saturday, 14th December 2024

ತೆಲಂಗಾಣ ದಶಮಾನೋತ್ಸವ ದಿನಾಚರಣೆಗೆ ರಾಜ್ಯಪಾಲರಿಗೆ ಆಹ್ವಾನವಿಲ್ಲ..!

ಹೈದರಾಬಾದ್: ತೆಲಂಗಾಣ 10ನೇ ವರ್ಷಕ್ಕೆ ಕಾಲಿಟ್ಟಿದ್ದು, ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೆ ರಾಜ್ಯಪಾಲೆ ಡಾ.ತಮಿಳಿಸೈ ಸೌಂದರರಾಜನ್ ಅವರಿಗೆ ಆಹ್ವಾನವನ್ನೇ ನೀಡಿಲ್ಲ ಎಂದು ವರದಿಗಳಿಂದ ತಿಳಿದುಬಂದಿದೆ.
ಮೂರು ವಾರಗಳ ಕಾಲ ವಿಶೇಷ ಆಚರಣೆಗೆ ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ಅನುದಾನವನ್ನೂ ಬಿಡುಗಡೆ ಮಾಡಿದೆ. ಇದರ ನಡುವೆ ದಶಮಾನೋ ತ್ಸವ ದಿನಾಚರಣೆಗೆ ರಾಜ್ಯಪಾಲರಿಗೆ ಆಹ್ವಾನ ನೀಡದಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಅಸಮಧಾನಗೊಂಡಿರುವ ಸೌಂದರರಾಜನ್ ಅವರು, ಕೇವಲ ರಾಜ್ಯಪಾಲರ ಭವನದ ಕಾರ್ಯಕ್ರಮಗಳಲ್ಲಿ ಮಾತ್ರ ಭಾಗವಹಿಸಲು ಮುಂದಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

1969 ರಿಂದಲೂ ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಅನೇಕ ಹೋರಾಟಗಳು ನಡೆಯುತ್ತಿದ್ದವು. ನಿರಂತರ ಹೋರಾಟದಲ್ಲಿ ಅನೇಕರು ಪ್ರಾಣತೆತ್ತಿದ್ದರು. ಕೊನೆಗೂ ಜೂನ್​ 2, 2014 ರಲ್ಲಿ ಭಾರತದ 29 ನೇ ರಾಜ್ಯವಾಗಿ ತೆಲಂಗಾಣ ಉದಯಿಸಿತು. 2014 ರಲ್ಲಿ ಆಂಧ್ರಪ್ರದೇಶವನ್ನು ರಾಜ್ಯ ಎರಡು ಭಾಗಗಳಾಗಿ ವಿಂಗಡಿಸಲಾಯಿತು.

ಈ ವೇಳೆ ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ರಚನೆಯಾಯಿತು. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಜೂನ್ 2 ರಂದು ತೆಲಂಗಾಣ ರಾಜ್ಯ ರಚನೆ ದಿನವಾಗಿ ಆಚರಿಸಲಾಗುತ್ತಿದೆ. 9 ದಶಕಗಳನ್ನು ಪೂರೈಸಿರುವ ರಾಜ್ಯ ಇದೀಗ ಹತ್ತನೇ ವರ್ಷಕ್ಕೆ ಕಾಲಿಟ್ಟಿದೆ.