ಹೈದರಾಬಾದ್: ಇನ್ನು ಮುಂದೆ ಹೈದರಾಬಾದ್ ನಗರ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ಜಂಟಿ ರಾಜಧಾನಿಯಲ್ಲ. ತೆಲಂಗಾಣ ರಾಜಧಾನಿಯಾಗಿ ಹೈದರಾಬಾದ್ ಮುಂದುವರೆಯಲಿದ್ದು, ಆಂಧ್ರ ಪ್ರದೇಶ ರಾಜ್ಯಕ್ಕೆ ಹೊಸ ರಾಜಧಾನಿ ಘೋಷಣೆಯಾಗಲಿದೆ.
ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ವಿಭಜನೆ ಸಂದರ್ಭದಲ್ಲಿ 10 ವರ್ಷಗಳ ಕಾಲ ಹೈದರಾಬಾದ್ ನಗರ ಎರಡೂ ರಾಜ್ಯಗಳಿಗೆ ಜಂಟಿ ರಾಜಧಾನಿ ಎಂದು ನಿಯಮ ರೂಪಿಸಲಾಗಿತ್ತು. 2024ರ ಜೂನ್ 2ಕ್ಕೆ ಈ ನಿಯಮ ಅಂತ್ಯಗೊಂಡಿದ್ದು, ಹೈದರಾಬಾದ್ ರಾಜಧಾನಿಯಾಗಿ ತೆಲಂಗಾಣ ಇರಲಿದೆ.
ಆಂಧ್ರ ಪ್ರದೇಶ ಮರು ಸಂಘಟನೆ ಕಾಯ್ದೆ 2014ರ ಪ್ರಕಾರ ಹೈದರಾಬಾದ್ ತೆಲಂಗಾಣ ರಾಜ್ಯದ ರಾಜಧಾನಿಯಾಗಲಿದೆ. ಆಂಧ್ರ ಪ್ರದೇಶ ಸರ್ಕಾರ ಹೊಸ ರಾಜಧಾನಿಯನ್ನು ಘೋಷಣೆ ಮಾಡಬೇಕಿದೆ.
ಈ ಬಾರಿ ಚುನಾವಣೆಯಲ್ಲಿ ವೈಎಸ್ಆರ್ಪಿ ಪಕ್ಷದ ಮುಖ್ಯಸ್ಥ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಭಾರೀ ಪೈಪೋಟಿ ಎದುರಿಸು ತ್ತಿದ್ದಾರೆ. ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಮತ್ತು ನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಒಂದಾಗಿ ಎನ್ಡಿಎ ಮೈತ್ರಿಕೂಟಕ್ಕೆ ಬೆಂಬಲ ಘೋಷಣೆ ಮಾಡಿದ್ದಾರೆ.
ಮಂಗಳವಾರ ಆಂಧ್ರ ಪ್ರದೇಶ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಪಕ್ಷ ಹೊಸ ರಾಜಧಾನಿಯನ್ನು ಘೋಷಣೆ ಮಾಡಲಿದೆ. ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ಅಮರಾವತಿಯನ್ನು ನೂತನ ರಾಜಧಾನಿಯಾಗಿ ಘೋಷಣೆ ಮಾಡುವ ನಿರೀಕ್ಷೆ ಇದೆ.