Sunday, 15th December 2024

ತಮಿಳುನಾಡಿನಲ್ಲಿ ರೈತನಿಂದ ಪ್ರಧಾನಿ ಮೋದಿಗಾಗಿ ದೇವಸ್ಥಾನ…!

ಚೆನ್ನೈ: ತಮಿಳುನಾಡಿನಲ್ಲಿ ರೈತರೊಬ್ಬರು ತಮ್ಮ ಸ್ವಂತ ಹಣದಿಂದ ಪ್ರಧಾನಿ ನರೇಂದ್ರ ಮೋದಿ ಅವರ ದೇವಸ್ಥಾನ ಕಟ್ಟಿದ್ದಾರೆ.

ತಮಿಳುನಾಡಿನ ತಿರುಚ್ಚಿ ಬಳಿಯ ಸಾತನೂರಿನ ರೈತ, ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಶೇಷವಾಗಿ ಗೌರವ ಸಲ್ಲಿಸಲು ದೇವಾಲಯವನ್ನು ನಿರ್ಮಿಸಿ ದ್ದಾರೆ. ತಾವು ದುಡಿದ ಸ್ವಂತ ಹಣದಿಂದ ಬರೋಬ್ಬರಿ 1.25 ಲಕ್ಷ ರೂಪಾಯಿ ಖರ್ಚು ಮಾಡಿ ದೇವಾಲಯ ನಿರ್ಮಿಸಿದ್ದಾರೆ.

ತಿರುಚ್ಚಿ ಜಿಲ್ಲೆಯ ತರಿಯೌರ್ ಪ್ರದೇಶದ ಎರಕುಡಿ ಗ್ರಾಮದವರಾದ ರೈತ ಶಂಕರ್ ಅವರು ದುಬೈನಲ್ಲಿ ಕೆಲಸ ಮಾಡುತ್ತಿದ್ದು, ಕೃಷಿ ಮಾಡಲು ತಮ್ಮ ಊರಿಗೆ ಮರಳಿದರು. ಪ್ರಧಾನಿ ಮೋದಿಯವರ ಯೋಜನೆಗಳಿಂದ ಪ್ರೇರಿತರಾದ ಶಂಕರ್ ಅವರನ್ನು ಗೌರವಿಸಲು ನಿರ್ಧರಿಸಿ, ದೇವಸ್ಥಾನ ಕಟ್ಟಿದ್ದಾರೆ ಎಂದು ವರದಿ ಮಾಡಿದೆ.

2019 ರಲ್ಲಿ, ಶಂಕರ್ ದೇವಾಲಯವನ್ನು ನಿರ್ಮಿಸಿ ನರೇಂದ್ರ ಮೋದಿಯ ವಿಗ್ರಹವನ್ನು ಸ್ಥಾಪಿಸಿದರು. ಈ ದೇವಾಲಯವು ಪ್ರಧಾನಿ ಮೋದಿಯವರ ಸುಂದರವಾದ ಪ್ರತಿಮೆಯನ್ನು ಹೊಂದಿದೆ. ಇದರ ಜೊತೆಗೆ ದೇವಾಲಯದಲ್ಲಿ ಇತರ ಪ್ರಮುಖ ವ್ಯಕ್ತಿಗಳಾದ ಕಾಮರಾಜ್, ಎಂಜಿಆರ್, ಜಯಲಲಿತಾ, ಅಮಿತ್ ಶಾ ಮತ್ತು ಎಡಪ್ಪಾಡಿ ಪಳನಿಸ್ವಾಮಿ ಅವರ ಚಿತ್ರಗಳು ಇವೆ.

ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮೂರನೇ ಅವಧಿಗೆ ಮೋದಿ ಪ್ರಧಾನಿಯಾಗಲಿ ಎಂದು ಪ್ರಾರ್ಥಿಸುವುದಾಗಿ ಶಪಥ ಮಾಡಿದ್ದರು. ತೆಂಗು, ಮಾವು, ಹಲಸಿನ ಹಣ್ಣಿನ ಯಶಸ್ವಿ ಇಳುವರಿಯೊಂದಿಗೆ ಶಂಕರ್ ಪ್ರತಿನಿತ್ಯ ವಿಶೇಷ ಪೂಜೆ ಸಲ್ಲಿಸಿ, ಮೋದಿಯವರನ್ನು ದೇವರಂತೆ ಕಾಣುವ ಮೂಲಕ ತಮ್ಮ ಶಪಥ ನೆರವೇರಿಸುತ್ತಿದ್ದಾರೆ.

ಇನ್ನು, ರೈತ ಶಂಕರ್ ಪಳನಿ ಮುರುಗನ್ ದೇವಸ್ಥಾನಕ್ಕೆ ಚಿನ್ನ ಅರ್ಪಿಸಲು ಮತ್ತು ದೇಣಿಗೆ ನೀಡಲು ಯೋಜಿಸಿದ್ದಾರೆ. ಅಲ್ಲದೆ, ತಮ್ಮ ಹೊಲದಲ್ಲಿ ಕಟಾವು ಮಾಡಿದ 10 ಚೀಲ ಭತ್ತದಿಂದ ಸುಮಾರು 1,000 ಮಂದಿಗೆ ಅನ್ನದಾನದ ವ್ಯವಸ್ಥೆ ಮಾಡಿದ್ದಾರೆ. ಶಂಕರ್ ಅವರು ಪ್ರಧಾನಿಯವರ ಮಂದಿರಕ್ಕೆ ಕುಂಬಾಭಿಷೇಕ ನಡೆಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

ತಮ್ಮ ಬಳಿಕವೂ ದೇವಾಲಯ ಹೀಗೆಯೇ ನಡೆಯಬೇಕು ಎಂದು ತಮ್ಮ ಜಮೀನಿನ ಒಂದು ಭಾಗವನ್ನು ದೇವಸ್ಥಾನಕ್ಕೆ ಬರೆದಿದ್ದಾರೆ.