Saturday, 23rd November 2024

ಪಂಜಾಬ್ ಅಭಿವೃದ್ಧಿಗೆ ಆಮ್ ಆದ್ಮಿ ಪಕ್ಷದ 10 ಸೂತ್ರ ಸಿದ್ಧ

ಮೊಹಾಲಿ: ಪಂಜಾಬ್ ವಿಧಾನಸಭೆ ಚುನಾವಣೆ ಫೆಬ್ರವರಿ 14ರಂದು ನಡೆಯುತ್ತಿದ್ದು, ಪಂಜಾಬ್ ಅಭಿವೃದ್ಧಿಗೆ ಆಮ್ ಆದ್ಮಿ ಪಕ್ಷ 10 ಸೂತ್ರಗಳನ್ನು ಸಿದ್ಧಪಡಿಸಿದೆ.

ಜತೆಗೆ 10 ಭರವಸೆಗಳನ್ನು ನೀಡಿದ್ದು, ಮಾದರಿ ಪಂಜಾಬ್‌ ನಿರ್ಮಾಣ ಮಾಡುವುದಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ ಹೇಳಿದ್ದಾರೆ.

10 ಅಂಶಗಳ ಯೋಜನೆಗಳ ಮೂಲಕ ಪಂಜಾಬ್ ಅನ್ನು ಮಾದರಿ ರಾಜ್ಯವನ್ನಾಗಿ ಪರಿವರ್ತನೆ ಮಾಡುತ್ತೇವೆ. ಅಧಿಕಾರಕ್ಕೆ ಬಂದರೆ ಸಮೃದ್ಧ ಹಾಗೂ ಅಭಿವೃದ್ಧಿ ಹೊಂದಿದ ಪಂಜಾಬ್ ಅನ್ನು ನಿರ್ಮಾಣ ಮಾಡುತ್ತೇವೆ ಎಂದು ಹೇಳಿದ್ದಾರೆ.

ಪಕ್ಷ ಅಧಿಕಾರಕ್ಕೆ ಬಂದರೆ ಪಂಜಾಬ್‌ನಲ್ಲಿ ಆಳವಾಗಿ ಬೇರೂರಿರುವ ಡ್ರಗ್‌ ಮಾಫಿಯಾವನ್ನು ತೊಡೆದು ಹಾಕುತ್ತೇವೆ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆ ಎಂದು ವಾಗ್ದಾನ ಮಾಡಿದ್ದಾರೆ.

ಪಂಜಾಬ್‌ ಮಾಡೆಲ್‌ನಲ್ಲಿ ಉದ್ಯೋಗದ ಭರವಸೆ, ಮಹಿಳೆಯರಿಗೆ 1000 ರೂ. ಮಾಸಾಶನ ಹಾಗೂ ರೈತರ ಸಮಸ್ಯೆಗೆ ಮುಕ್ತಿ ಮುಂತಾದ ಭರವಸೆಗಳಿವೆ.

ಪಂಜಾಬ್‌ನಲ್ಲಿ ಈಗಾಗಲೇ ಚುನಾವಣೆ ಘೋಷಣೆಯಾಗಿದ್ದು, ಫೆಬ್ರವರಿ 14 ಕ್ಕೆ ಮತದಾನ ನಡೆಯಲಿದೆ. ಮಾರ್ಚ್ 20 ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ನಾವು ಅಧಿಕಾರಕ್ಕೆ ಬಂದರೆ ಪ್ರಧಾನಿಗೆ ಮಾತ್ರವಲ್ಲ ಪಂಜಾಬ್‌ನ ಪ್ರತಿಯೊಬ್ಬರ ರಕ್ಷಣೆ ಬಗ್ಗೆಯೂ ನಾವು ಖಾತರಿ ಪಡಿಸುತ್ತೇವೆ ಎಂದು ಹೇಳಿದರು. ಇದೇ ವೇಳೆ ಮುಂದಿನ ವಾರ ಆಮ್ ಆದ್ಮೀ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎನ್ನುವುದನ್ನು ನಾವು ಘೋಷಣೆ ಮಾಡಲಿದ್ದೇವೆ ಎಂದು ತಿಳಿಸಿದರು.

ಪಂಜಾಬ್ ಅಭಿವೃದ್ಧಿಗಾಗಿ 10 ಅಂಶಗಳೇನು?

* ಭ್ರಷ್ಟಾಚಾರಕ್ಕೆ ಅಂತ್ಯ ಹಾಡುವುದು

* ಶೈಕ್ಷಣಿಕ ಕ್ರಾಂತಿ

* ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ

* 24×7 ಉಚಿತ ವಿದ್ಯುತ್‌

* ಮಹಿಳೆಯರಿಗೆ 1000 ರೂ. ಮಾಸಾಶನ

* ಎಲ್ಲರಿಗೂ ಉದ್ಯೋಗ

* ರೈತರ ಸಮಸ್ಯೆಗಳಿಗೆ ಪರಿಹಾರ

* ಉದ್ಯಮ ಸ್ನೇಹಿ ಸರ್ಕಾರ.

* ಡ್ರಗ್‌ ಮಾಫಿಯಾಗೆ ಅಂತ್ಯ ಹಾಡುವುದು

* ಶಾಂತಿಯುತ ಪಂಜಾಬ್‌

ಪಂಜಾಬ್‌ನ 117 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 14 ಒಂದೇ ಹಂತದ ಮತದಾನ ನಡೆಯಲಿದೆ. ಗೋವಾ, ಪಂಜಾಬ್, ಮಣಿಪುರ್, ಉತ್ತರಾಖಂಡ್ ಹಾಗೂ ಉತ್ತರ ಪ್ರದೇಶ ಸೇರಿದಂತೆ ಪಂಚರಾಜ್ಯಗಳಿಗೆ ಚುನಾವಣಾ ದಿನಾಂಕವನ್ನು ಘೋಷಿಸಲಾಗಿದೆ. ಪಂಜಾಬ್ ವಿಧಾನಸಭಾ ಚುನಾವಣೆಯು ಫೆಬ್ರವರಿ 14ರಂದು ಸೋಮವಾರ ನಡೆಯಲಿದೆ. ಒಟ್ಟು ಏಳು ಹಂತಗಳಲ್ಲಿ ಪಂಚರಾಜ್ಯ ಚುನಾವಣೆ ನಡೆಯಲಿದೆ.