Friday, 1st November 2024

Terror Attack: ಜಮ್ಮು & ಕಾಶ್ಮೀರದಲ್ಲಿ ಮತ್ತೆ ಉಗ್ರರ ದಾಳಿ; ಇಬ್ಬರು ವಲಸೆ ಕಾರ್ಮಿಕರಿಗೆ ಗಾಯ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಉಗ್ರರ ಅಟ್ಟಹಾಸ ಮುಂದುವರಿದಿದ್ದು, ನ. 1ರಂದು ನಡೆದ ದಾಳಿಯಲ್ಲಿ ಉತ್ತರ ಪ್ರದೇಶದ ವಲಸೆ ಕಾರ್ಮಿಕರಿಬ್ಬರು ಗಾಯಗೊಂಡಿದ್ದಾರೆ (Terror Attack). ಮಧ್ಯ ಕಾಶ್ಮೀರದ ಬುದ್ಗಾಮ್‌ ಜಿಲ್ಲೆಯ ಮಗಮ್‌ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡವರನ್ನು ಸಂಜಯ್‌ ಮತ್ತು ಉಸ್ಮಾನ್‌ ಎಂದು ಗುರುತಿಸಲಾಗಿದ್ದು, ಇಬ್ಬರನ್ನೂ ಸಮೀಪದ ಆಸ್ಪತ್ರಗೆ ದಾಖಲಿಸಲಾಗಿದೆ. ಗಾಯಗೊಂಡ ಕಾರ್ಮಿಕರು ಜಲ್‌ ಜೀವನ್‌ ಪ್ರಾಜೆಕ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಸದ್ಯ ಇಬ್ಬರು ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉಗ್ರರ ಹೆಡೆ ಮುರಿ ಕಟ್ಟಲು ಪೊಲೀಸರು ಶೋಧ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದಾರೆ. ಕಳೆದ 2 ವಾರಗಳ ಅಂತರದಲ್ಲಿ ವಲಸೆ ಕಾರ್ಮಿಕ ಮೇಲೆ ನಡೆಯುತ್ತಿರುವ ಉಗ್ರರ 4ನೇ ದಾಳಿ ಇದಾಗಿದೆ.

ಕಳೆದ ವಾರ 6 ಮಂದಿ ಬಲಿಯಾಗಿದ್ದರು

ಜಮ್ಮು ಮತ್ತು ಕಾಶ್ಮೀರದ ಗಂಡರ್ಬಾಲ್ ಜಿಲ್ಲೆಯ ಗಗಾಂಗೀರ್‌ನಲ್ಲಿ ಅ. 20ರಂದು ನಡೆದ ಭಯೋತ್ಪಾದಕರ ದಾಳಿಯಲ್ಲಿ ವೈದ್ಯ, ಐವರು ವಲಸಿಗ ಕಾರ್ಮಿಕರು ಸೇರಿ ಕನಿಷ್ಠ 6 ಮಂದಿ ಸಾವನ್ನಪ್ಪಿದ್ದರು. ಗುಂಡ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಕಾರ್ಮಿಕರು ನೆಲೆಸಿರುವ ಶಿಬಿರದ ಮೇಲೆ ಭಯೋತ್ಪಾದಕರು ನಿರಂತರ ಗುಂಡು ಹಾರಿಸಿದ್ದರು.

ದೀರ್ಘಕಾಲದಿಂದ ಶಾಂತಿಯುತ ಪ್ರದೇಶವೆಂದು ಪರಿಗಣಿಸಲ್ಪಟ್ಟ ಗಂಡರ್ಬಾಲ್ ಜಿಲ್ಲೆಯಲ್ಲಿ ಈ ದಾಳಿ ನಡೆದಿದ್ದು ಕಳವಳವನ್ನುಂಟು ಮಾಡಿತ್ತು. ಇತ್ತೀಚಿನ ವರ್ಷಗಳಲ್ಲಿ ಮೊದಲ ಬಾರಿಗೆ ಸ್ಥಳೀಯರಲ್ಲದವರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿತ್ತು. ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು ಈ ದಾಳಿಯನ್ನು ಖಂಡಿಸಿದ್ದರು. “ಸೋನಾಮಾರ್ಗ್ ಪ್ರದೇಶದ ಗಗಾಂಗೀರ್‌ನಲ್ಲಿ ಸ್ಥಳೀಯರಲ್ಲದ ಕಾರ್ಮಿಕರ ಮೇಲೆ ನಡೆದ ಭೀಕರ ದಾಳಿ ಖಂಡನೀಯ. ಈ ಭಯೋತ್ಪಾದಕ ದಾಳಿಯಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಇನ್ನೂ 2-3 ಜನರು ಗಾಯಗೊಂಡಿದ್ದಾರೆ. ನಿರಾಯುಧ ಮುಗ್ಧ ಜನರ ಮೇಲಿನ ಈ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ” ಎಂದು ಅವರು ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದರು.

ಜೂನ್ 9 ರಂದು ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಭಯೋತ್ಪಾದಕರ ಗುಂಡಿನ ದಾಳಿಗೆ ಬಸ್ ಕಣಿವೆಗೆ ಉರುಳಿ ಒಂಬತ್ತು ಯಾತ್ರಿಕರು ಮೃತಪಟ್ಟಿದ್ದರು. ಆ ಘಟನೆಯ ಬಳಿಕ ನಾಗರಿಕರ ಮೇಲೆ ನಡೆದ ಅತ್ಯಂತ ಮಾರಣಾಂತಿಕ ದಾಳಿ ಇದಾಗಿತ್ತು.

ಇನ್ನು ಅ. 24ರಂದು ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ತ್ರಾಲ್‌ ಪ್ರದೇಶದಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿ ಉತ್ತರ ಪ್ರದೇಶ ಮೂಲದ ಕಾರ್ಮಿಕನೊಬ್ಬ ಗಾಯಗೊಂಡಿದ್ದ. ಗಾಯಗೊಂಡವನ್ನು ಬಿಜ್ನೋರ್ ನಿವಾಸಿ ಶುಭಂ ಕುಮಾರ್ ಎಂದು ಗುರುತಿಸಲಾಗಿತ್ತು. ಬಟಗುಂಡ್ ಗ್ರಾಮದಲ್ಲಿ ಭಯೋತ್ಪಾದಕರು ಆತನ ಮೇಲೆ ಗುಂಡು ಹಾರಿಸಿದ್ದು, ತೋಳಿಗೆ ಗಾಯವಾಗಿತ್ತು. ಶುಭಂ ಕುಮಾರನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು, ಅಪಾಯದಿಂದ ಪಾರಾಗಿದ್ದ.

ಈ ಸುದ್ದಿಯನ್ನೂ ಓದಿ: Terror Attack: 27 ಗಂಟೆಗಳ ಸೇನಾ ಕಾರ್ಯಾಚರಣೆ ಮುಕ್ತಾಯ- ಅಖ್ನೂರ್‌ ದಾಳಿಯ ಉಗ್ರರು ಎನ್‌ಕೌಂಟರ್‌ಗೆ ಬಲಿ