ಶ್ರೀನಗರ: ಜಮ್ಮು ಮತ್ತು ಕಾಶ್ಮೀರ (Jammu and Kashmir)ದ ಗುಲ್‌ಮಾರ್ಗ್ (Gulmarg)ನ ಬೋಟಪತ್ರಿ (Botapathri)ಯಲ್ಲಿ ಗುರುವಾರ (ಅಕ್ಟೋಬರ್ 24) ಸಂಜೆ ಸೇನಾ ವಾಹನದ ಮೇಲೆ ದಾಳಿ ನಡೆದಿದ್ದು, ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಮೃತರಲ್ಲಿ ಇಬ್ಬರು ಸೈನಿಕರು ಮತ್ತು ಇಬ್ಬರು ನಾಗರಿಕ ಪೋರ್ಟರ್‌ಗಳು ಸೇರಿದ್ದಾರೆ. ಈ ವಾಹನವು 18 ರಾಷ್ಟ್ರೀಯ ರೈಫಲ್ಸ್ (Rashtriya Rifles)ಗೆ ಸೇರಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
ಪುಲ್ವಾಮ ಜಿಲ್ಲೆಯಲ್ಲಿ ಉಗ್ರನ ಗುಂಡಿನ ದಾಳಿಗೆ ಉತ್ತರ ಪ್ರದೇಶದ ಕಾರ್ಮಿಕನೊಬ್ಬ ಗಾಯಗೊಂಡ ಕೆಲವೇ ಹೊತ್ತಿನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ತ್ರಾಲ್ ಪ್ರದೇಶದಲ್ಲಿ ಗುರುವಾರ ಉಗ್ರರು ದಾಳಿ ನಡೆಸಿದ್ದರು. ಪರಿಣಾಮವಾಗಿ ಉತ್ತರ ಪ್ರದೇಶ ಮೂಲದ ಕಾರ್ಮಿಕನೊಬ್ಬ ಗಾಯಗೊಂಡಿದ್ದಾನೆ. ಗಾಯಗೊಂಡವನ್ನು ಬಿಜ್ನೋರ್ ನಿವಾಸಿ ಶುಭಂ ಕುಮಾರ್ ಎಂದು ಗುರುತಿಸಲಾಗಿದೆ. ಬಟಗುಂಡ್ ಗ್ರಾಮದಲ್ಲಿ ಭಯೋತ್ಪಾದಕರು ಆತನ ಮೇಲೆ ಗುಂಡು ಹಾರಿಸಿದ್ದು, ತೋಳಿಗೆ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಭಂ ಕುಮಾರನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆತ ಚೇತರಿಸುತ್ತಿದ್ದಾನೆ ಎಂದು ತಿಳಿದು ಬಂದಿದೆ. ಕಳೆದ ಒಂದು ವಾರದ ಅವಧಿಯಲ್ಲಿ ಕಾಶ್ಮೀರದಲ್ಲಿ ಸ್ಥಳೀಯರಲ್ಲದ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ನಡೆಸಿದ ಮೂರನೇ ದಾಳಿ ಇದಾಗಿದೆ.
ಗಂದರ್‌ಬಾಲ್ ಜಿಲ್ಲೆಯ ಸುರಂಗ ನಿರ್ಮಾಣ ಸ್ಥಳದಲ್ಲಿ ಭಾನುವಾರ (ಅಕ್ಟೋಬರ್ 20) ನಡೆದ ಭಯೋತ್ಪಾದಕ ದಾಳಿಯಲ್ಲಿ 6 ಹೊರ ರಾಜ್ಯದ ಕಾರ್ಮಿಕರು ಮತ್ತು ಸ್ಥಳೀಯ ವೈದ್ಯರೊಬ್ಬರು ಮೃತಪಟ್ಟಿದ್ದರು. ಅಮೆರಿಕ ನಿರ್ಮಿತ M4 ಕಾರ್ಬನ್ ಮತ್ತು AK 47 ಶಸ್ತ್ರ ಹಿಡಿದು ಕಾರ್ಮಿಕರ ವಸತಿ ಪ್ರದೇಶಕ್ಕೆ ನುಗ್ಗಿದ ಎರಡು ಭಯೋತ್ಪಾದಕರು ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದರು.
ಭಯೋತ್ಪಾದಕರು ನಡೆಸಿದ ದಾಳಿಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೃತರು ಶ್ರೀನಗರ-ಸೋನಾಮಾರ್ಗ್ ಹೆದ್ದಾರಿಯಲ್ಲಿನ ಜಡ್ ಮೊರ್ಚ್ ( Z- Morh) ಸುರಂಗ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಎಪಿಸಿಒ (APCO) ಇನ್ಫ್ರಾಟೆಕ್ ಕಂಪನಿಯ ಉದ್ಯೋಗಿಗಳಾಗಿದ್ದರು. ಕಾರ್ಮಿಕರ ವಸತಿ ಪ್ರದೇಶವು ಸುರಂಗದ ಮಾರ್ಗದ ಕೆಳಗೆ ಒಂದು ಬದಿಯಲ್ಲಿ ಬಂಜರು ಪರ್ವತಗಳು ಮತ್ತು ಇನ್ನೊಂದು ಬದಿಯಲ್ಲಿ ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯಿಂದ ಸುತ್ತುವರಿದಿತ್ತು. ಹೀಗಾಗಿ ಉಗ್ರರು ಭದ್ರತಾ ಪಡೆಯ ಕಣ್ಣು ತಪ್ಪಿಸಿ ಒಳನುಗ್ಗಲು ಅನುಕೂಲವಾಯಿತು ಎಂದು ಹೇಳಲಾಗುತ್ತಿದೆ.
ಜೂನ್ 9ರಂದು ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಭಯೋತ್ಪಾದಕರ ಗುಂಡಿನ ದಾಳಿಗೆ ಬಸ್ ಕಣಿವೆಗೆ ಉರುಳಿ 10 ಯಾತ್ರಿಕರು ಮೃತಪಟ್ಟಿದ್ದರು. ಆ ಘಟನೆಯ ಬಳಿಕ ನಾಗರಿಕರ ಮೇಲೆ ನಡೆದ ಅತ್ಯಂತ ಮಾರಣಾಂತಿಕ ದಾಳಿ ಇದಾಗಿದೆ.
ಸದ್ಯ ಜಮ್ಮು ಮತ್ತು ಕಾಶ್ಮೀರದ ನೂತನ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ದಿಲ್ಲಿಯಲ್ಲಿದ್ದಾರೆ. ರಾಜ್ಯ ಸ್ಥಾನಮಾನ ಪುನಃ ಸ್ಥಾಪಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಲು ಅವರು ದಿಲ್ಲಿಗೆ ಭೇಟಿ ನೀಡಿದ್ದಾರೆ. ಈಗಾಗಲೇ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಅವರು ರಾಜ್ಯದಲ್ಲಿ ಇಲ್ಲದ ವೇಳೆ ಸೇನಾ ವಾಹನದ ಮೇಲೆ ದಾಳಿ ನಡೆದಿದೆ.
ಈ ಸುದ್ದಿಯನ್ನೂ ಓದಿ: Terror attack : ಕಾಶ್ಮೀರದಲ್ಲಿ ಮತ್ತೆ ಉಗ್ರರ ಉಪಟಳ : ಯುಪಿ ಮೂಲದ ಕಾರ್ಮಿಕನ ಮೇಲೆ ಗುಂಡಿನ ದಾಳಿ