Friday, 22nd November 2024

Terror Attack: ಜಮ್ಮು & ಕಾಶ್ಮೀರದಲ್ಲಿ ಮತ್ತೆ ಉಗ್ರರ ದಾಳಿ; ಇಬ್ಬರು ವಿಲೇಜ್‌ ಡಿಫೆನ್ಸ್‌ ಗಾರ್ಡ್‌ಗಳ ಹತ್ಯೆ

Terror Attack

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ (Jammu and Kashmir)ದಲ್ಲಿ ಭಯೋತ್ಪಾದಕರ ದಾಳಿ ಮುಂದುವರಿದಿದ್ದು, ಗುರುವಾರ (ನ. 7) ಕಿಶ್ತ್ವಾರ್ ಜಿಲ್ಲೆಯಲ್ಲಿ ಇಬ್ಬರು ವಿಲೇಜ್‌ ಡಿಫೆನ್ಸ್‌ ಗಾರ್ಡ್‌(VDGs)ಗಳನ್ನು ಹತ್ಯೆ ಮಾಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಮೃತರನ್ನು ಓಹ್ಲಿ ಕುಂತ್ವಾರಾ ಗ್ರಾಮದ ನಿವಾಸಿಗಳಾದ ಮೊಹಮ್ಮದ್ ಖಲೀಲ್ ಅವರ ಪುತ್ರ ನಜೀರ್ ಅಹ್ಮದ್ ಮತ್ತು ಅಮರ್ ಚಂದ್ ಅವರ ಪುತ್ರ ಕುಲದೀಪ್ ಕುಮಾರ್ ಎಂದು ಗುರುತಿಸಲಾಗಿದೆ (Terror Attack).

ಇಬ್ಬರು ವಿಡಿಜಿಗಳನ್ನು ಕುಂಟ್ವಾರಾದಿಂದ ಭಯೋತ್ಪಾದಕರು ಅಪಹರಿಸಿ ನಂತರ ಕೊಲೆ ಮಾಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಅಂಗಸಂಸ್ಥೆಯಾದ ಕಾಶ್ಮೀರ್ ಟೈಗರ್ಸ್ ಈ ಹತ್ಯೆಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಇಬ್ಬರು ಮೃತ ವಿಡಿಜಿಗಳ ಫೋಟೋವನ್ನು ಉರ್ದು ಭಾಷೆಯಲ್ಲಿ ಬರೆದ ಪತ್ರದೊಂದಿಗೆ ಸಂಘಟನೆ ಹಂಚಿಕೊಂಡಿದೆ. ಅದಾಗ್ಯೂ ಪೊಲೀಸರು ಈ ಸುದ್ದಿಯನ್ನು ಇನ್ನೂ ದೃಢಕರಿಸಿಲ್ಲ.

ಕಾಶ್ಮೀರ್ ಟೈಗರ್ಸ್ ಲೆಟರ್ ಹೆಡ್‌ನಲ್ಲಿ ಬರೆಯಲಾಗಿದೆ ಎನ್ನಲಾದ ಪತ್ರದಲ್ಲಿ ಜನರಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ. “ಕುಲದೀಪ್ ಕುಮಾರ್ ಮತ್ತು ನಜೀರ್ ಅವರು ಗುರುವಾರ ಬೆಳಗ್ಗೆ ಕಿಶ್ತ್ವಾರ್ ಪ್ರದೇಶದ ದಟ್ಟ ಅರಣ್ಯದಲ್ಲಿ ಉಗ್ರನನ್ನು ಬೆನ್ನಟ್ಟಿದರು. ಬಳಿಕ ದಟ್ಟ ಅರಣ್ಯದಲ್ಲಿ ಉಗ್ರರು ಅವರನ್ನು ಹತ್ಯೆ ಮಾಡಿ ಅಡಗುತಾಣ ಸೇರಿಕೊಂಡಿದ್ದಾರೆʼʼ ಎಂದು ಮೂಲಗಳು ಹೇಳಿವೆ.

“ನಾವು ಇಲ್ಲಿಯವರೆಗೆ ಒಬ್ಬ ಸಾಮಾನ್ಯ ಹಿಂದೂವನ್ನು ಕೊಂದಿಲ್ಲ. ನಾವು ಭಾರತೀಯ ಸೇನೆಯ ವಿರುದ್ಧ ಹೋರಾಡುತ್ತಿದ್ದೇವೆ. ಆದಾಗ್ಯೂ ಕೆಲವು ಅಜ್ಞಾನಿಗಳು ವಿಡಿಜಿಗೆ ಸೇರುತ್ತಿದ್ದಾರೆ. ಅಂತಹ ಜನರು ಇಂದಿನ ಘಟನೆಯಿಂದ ಪಾಠ ಕಲಿಯಬೇಕು ಮತ್ತು ಅವರು ವಿಡಿಜಿಗೆ ಸೇರಬಾರದು. ಎಚ್ಚರಿಕೆಯನ್ನು ಉಲ್ಲಂಘಿಸಿದವರಿಗೂ ಇದೇ ಗತಿʼʼ ಎಂದು ಪತ್ರದಲ್ಲಿ ಬರೆಯಲಾಗಿದೆ ಎಂದು ವರದಿ ತಿಳಿಸಿದೆ.

ವಿಡಿಸಿ ಜಮ್ಮು ಮತ್ತು ಕಾಶ್ಮೀರದ ಭಯೋತ್ಪಾದನಾ ವಿರೋಧಿ ಗ್ರಿಡ್‌ನ ಪ್ರಮುಖ ಭಾಗವಾಗಿದೆ ಮತ್ತು ಉಗ್ರರಿಂದ ಜನರನ್ನು ರಕ್ಷಿಸಲು ಗ್ರಾಮಸ್ಥರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಲು 1990ರ ದಶಕದ ಮಧ್ಯದಲ್ಲಿ ಚೆನಾಬ್ ಕಣಿವೆ ಪ್ರದೇಶದಲ್ಲಿ ಇದನ್ನು ಮೊದಲ ಬಾರಿಗೆ ಸ್ಥಾಪಿಸಲಾಯಿತು. ವಿಡಿಜಿ ಗ್ರಾಮಸ್ಥರು ಮತ್ತು ಪೊಲೀಸ್ ಅಧಿಕಾರಿಗಳನ್ನು ಒಳಗೊಂಡಿರುತ್ತವೆ. ಇತ್ತೀಚಿನ ಅಧಿಕೃತ ಅಂಕಿಅಂಶಗಳ ಪ್ರಕಾರ ಇಲ್ಲಿ ಒಟ್ಟು 4,125 ವಿಡಿಜಿಗಳಿದ್ದಾರೆ. ಭಾರತೀಯ ಸೇನೆಯು ಕಾಲಕಾಲಕ್ಕೆ ಶಸ್ತ್ರಾಸ್ತ್ರ ನಿರ್ವಹಣೆ ಮತ್ತು ಗುಪ್ತಚರ ಸಂಗ್ರಹಣೆ ಕೌಶಲ್ಯಗಳಲ್ಲಿ ಅವರಿಗೆ ತರಬೇತಿ ನೀಡುತ್ತದೆ.

ಜನನಿಬಿಡ ಮಾರುಕಟ್ಟೆಯಲ್ಲಿ ಗ್ರೆನೇಡ್‌ ಸ್ಫೋಟ

ನ. 3ರಂದು ಶ್ರೀನಗರದ ಮಾರುಕಟ್ಟೆಯ ಮೇಲೆ ಭಯೋತ್ಪಾದಕರು ಗ್ರೆನೇಡ್ ಎಸೆದ ಪರಿಣಾಮ ಕನಿಷ್ಠ 9ಕ್ಕೂ ಅಧಿಕ ನಾಗರಿಕರು ಗಾಯಗೊಂಡಿದ್ದರು. ಶ್ರೀನಗರದ ಪ್ರವಾಸಿ ಸ್ವಾಗತ ಕೇಂದ್ರದ ಬಳಿಯ ಮಾರುಕಟ್ಟೆಯಲ್ಲಿ ಸ್ಫೋಟ ಸಂಭವಿಸಿತ್ತು. ಗಾಯಗೊಂಡವರನ್ನು ಸ್ಥಳಾಂತರಿಸಲು ಮತ್ತು ಭಯೋತ್ಪಾದಕರ ಪತ್ತೆಗಾಗಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಪೊಲೀಸರು ಮತ್ತು ಅರೆಸೇನಾ ಪಡೆಗಳು ತಕ್ಷಣ ಸ್ಥಳಕ್ಕೆ ಧಾವಿಸಿತ್ತು. ಶ್ರೀನಗರದಲ್ಲಿ ಭದ್ರತಾ ಪಡೆಗಳು ಲಷ್ಕರ್-ಎ-ತೊಯ್ಬಾಗೆ ಸೇರಿದ ಪಾಕಿಸ್ತಾನದ ಉನ್ನತ ಭಯೋತ್ಪಾದಕನನ್ನು ಹೊಡೆದುರುಳಿಸಿದ ಒಂದು ದಿನದ ನಂತರ ಗ್ರೆನೇಡ್ ದಾಳಿ ನಡೆದಿತ್ತು.

ಈ ಸುದ್ದಿಯನ್ನೂ ಓದಿ: Terror Attack: ಜಮ್ಮು & ಕಾಶ್ಮೀರದಲ್ಲಿ ಮತ್ತೆ ಉಗ್ರರ ದಾಳಿ; ಇಬ್ಬರು ವಲಸೆ ಕಾರ್ಮಿಕರಿಗೆ ಗಾಯ