Thursday, 12th December 2024

ಉಗ್ರರ ನಂಟು: ಮೂವರು ಸರ್ಕಾರಿ ನೌಕರರ ವಜಾ

ಶ್ರೀನಗರ : ಉಗ್ರವಾದ ಬೆಂಬಲಿಸಿ ಭಯೋತ್ಪಾದಕ ಸಂಘಟನೆಗಳೊಂದಿಗೆ ಕೈ ಜೋಡಿಸಿ ಕೆಲಸ ಮಾಡುತ್ತಿದ್ದ ಆರೋಪದ ಮೇರೆಗೆ ಜಮ್ಮು ಮತ್ತು ಕಾಶ್ಮೀರ ಆಡಳಿತವು ಮೂವರು ಸರ್ಕಾರಿ ನೌಕರರನ್ನು ಸೇವೆಯಿಂದ ವಜಾಗೊಳಿಸಿ ಕಠಿಣ ಕ್ರಮ ಜರುಗಿಸಿದೆ.

ಈ ಮೂಲಕ ವಜಾಗೊಂಡಿರುವ ನೌಕರರ ಸಂಖ್ಯೆ 52ಕ್ಕೆ ತಲುಪಿದೆ.

ಲೆಫ್ಟಿನೆಂಟ್ ಗವರ್ನರ್ ಆಡಳಿತವು ಈ ಉದ್ಯೋಗಿಗಳನ್ನು ಭಾರತದ ಸಂವಿಧಾನದ 311ನೇ ವಿಧಿಯ ಅಡಿಯಲ್ಲಿ ವಜಾಗೊಳಿಸಿದೆ. ಕಾಶ್ಮೀರ ವಿವಿಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಫಹೀಮ್ ಅಸ್ಲಾಂ, ಹಣಕಾಸು ಇಲಾಖೆಯ ಉದ್ಯೋಗಿ (ಕಂದಾಯ ಅಧಿಕಾರಿ) ಮಾರ್ವತ್ ಹುಸೇನ್ ಮಿರ್ ಮತ್ತು ಪೊಲೀಸ್ ಕಾನ್ಸ್‌ ಟೇಬಲ್ ಅರ್ಷದ್ ಅಹ್ಮದ್ ಥೋಕರ್ ವಜಾಗೊಂಡ ಉದ್ಯೋಗಿಗಳು.

ಭಾರತದ ರಾಷ್ಟ್ರಪತಿ, ರಾಜ್ಯಪಾಲರು ಅಥವಾ ಲೆಫ್ಟಿನೆಂಟ್ ಗವರ್ನರ್ ಯಾವುದೇ ತನಿಖೆಯಿಲ್ಲದೆ ದೇಶ ವಿರೋಧಿ ಅಥವಾ ಉಗ್ರಗಾಮಿ ಚಟುವಟಿಕೆಗಳಲ್ಲಿ ತೊಡಗಿರುವ ನೌಕರರನ್ನು ವಜಾಗೊಳಿಸುವ ಅಧಿಕಾರ ಹೊಂದಿದ್ದಾರೆ.

ಏಪ್ರಿಲ್ 2021ರಲ್ಲಿ ಲೆಫ್ಟಿನೆಂಟ್ ಗವರ್ನರ್ ಆಡಳಿತವು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸಿಐಡಿ ವಿಂಗ್ ಆರ್.ಆರ್. ಸ್ವೈನ್ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ರಚಿಸಿತು. ಇದು ಸರ್ಕಾರಿ ನೌಕರರು ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡ ಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದೆ.