Sunday, 15th December 2024

Terrorist Attack: ಮಣಿಪುರದಲ್ಲಿ ಉಗ್ರರ ಅಟ್ಟಹಾಸ; ಡ್ರೋನ್‌ ಮೂಲಕ ಭಾರೀ ಬಾಂಬ್‌ ಸ್ಫೋಟ- ಮಹಿಳೆ ಬಲಿ

Terrorist attack

ಇಂಫಾಲ್‌: ಮಣಿಪುರ(Manipur)ದಲ್ಲಿ ಉಗ್ರರ ಅಟ್ಟಹಾಸ(Terrorist Attack)ಕ್ಕೆ ಓರ್ವ ಮೃತಪಟ್ಟಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಇಂಫಾಲ್‌ನ ಕಾಂಗ್‌ಚುಪ್ ಪ್ರದೇಶದಲ್ಲಿರುವ ಕೌಟ್ರುಕ್ ಗ್ರಾಮದಲ್ಲಿ ನಿನ್ನೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಅಲ್ಲದೇ ಬಾಂಬ್‌ ಸ್ಫೋಟಿ(Bomb Blast)ಸಿದ್ದಾರೆ. ಗ್ರಾಮದ ನಿವಾಸಿ ನ್ಯಾಂಗ್‌ಬಮ್‌ ಓಂಗ್ಬಿ ಸುರ್ಬಲಾ ಎಂದು ಗುರುತಿಸಲಾಗಿದೆ. ಈಕೆ ತನ್ನ 11 ವರ್ಷದ ಮಗಳ ಜೊತೆ ತವರು ಮನೆಗೆ ಬರುತ್ತಿದ್ದಾಗ  ಆಕೆ ಮೇಲೆ ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿಗೆ ಸ್ಥಳದಲ್ಲೇ ಆಕೆ ಕೊನೆಯುಸಿರೆಳೆದಿದ್ದಾಳೆ ಎನ್ನಲಾಗಿದೆ.

ಎರಡು ಡ್ರೋನ್‌ಗಳು ಹಾರಾಟ

ಇನ್ನು ಘಟನೆ ಕುರಿತು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದು, ಕೌಟ್ರುಕ್ ಗ್ರಾಮದಲ್ಲಿ ಬಾಂಬ್‌ ಸ್ಫೋಟಕ್ಕೂ ಮುನ್ನ ಎರಡು  ಡ್ರೋನ್‌ಗಳು ಹಾರಾಟ ನಡೆಸುತ್ತಿದ್ದವು. ಬಾಂಬ್‌ ಸ್ಫೋಟಕ್ಕೆ ಇಡೀ ಹಳ್ಳಿಯೇ ಧ್ವಂಸಗೊಂಡಿದೆ. ಈಗಲೂ ಹಲವು ಮನೆಗಳು ಹೊತ್ತಿ ಉರಿಯುತ್ತಿವೆ. ಅನೇಕರು ಗಂಭೀರಔಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇನ್ನು ಉಗ್ರರು ಗುಂಡಿನ ದಾಳಿ ಆರಂಭಿಸುತ್ತಿದ್ದಂತೆ ಸೇನೆ ಮತ್ತು ಸ್ಥಳಿಯ ಪೊಲೀಸರು ಜಂಟೀ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯರು, ಪತ್ರಕರ್ತರು ಮತ್ತು ಪೊಲೀಸರು ಘಟನೆಯಲ್ಲಿ ಗಂಭಿರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕೃತ ಮಾಹಿತಿ ಹೊರಬಿದ್ದಿದೆ. ಇನ್ನು ಈ ಘಟನೆಗೂ ಕೆಲವೇ ದಿನಗಳ ಹಿಂದೆ ಕುಕಿ ಸಮುದಾಯದವರು ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್‌ ವಿರುದ್ಧ ಕಂಗ್‌ಪೋಕ್ಡಿ ಮತ್ತು ಚೂರಚಂದ್‌ಪುರ ಜಿಲ್ಲೆಗಳಲ್ಲಿ ಪ್ರತಿಭಟನೆ ರ್ಯಾಲಿ ನಡೆಸಿದ್ದರು.

 ದಾಳಿ ಹಿಂದೆ ಕುಕಿ ಉಗ್ರರ ಕೈವಾಡ

ಇನ್ನು ಈ ಬಾಂಬ್‌ ಸ್ಫೋಟ ಮತ್ತು ಗುಂಡಿನ ದಾಳಿ ಹಿಂದೆ ಕುಕಿ ಉಗ್ರರ ಕೈವಾಡ ಇರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮಣಿಪುರ ಪೊಲೀಸರು ಹೇಳಿಕೆಯೊಂದರಲ್ಲಿ, ಕುಕಿ ಉಗ್ರಗಾಮಿಗಳು “ಸಾಮಾನ್ಯ ಯುದ್ಧದಲ್ಲಿ ಸಾಮಾನ್ಯವಾಗಿ ಬಳಸುವ” ತಂತ್ರಗಳನ್ನು ಬಳಸಿಕೊಂಡು ದಾಳಿ ನಡೆಸಿದ್ದಾರೆ.  ಡ್ರೋನ್‌ ಬಾಂಬ್‌ಗಳನ್ನು ಕುಕಿ ಉಗ್ರರು ಮಾತ್ರ ಬಳಸುವಂತಹ ಸ್ಫೋಟಕ ಸಾಧನಗಳಾಗಿವೆ. ಹೀಗಾಗಿ ಈ ದಾಳಿಯ ಹಿಂದೆಯೂ ಅವರ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ದಾಳಿಕೋರರನ್ನು ಸರಿಯಾಗಿ ಹಿಮ್ಮೆಟ್ಟಿಸುವಲ್ಲಿ ಸೇನೆ ಯಶಸ್ವಿಯಾಗಿದೆ.  ಸಾರ್ವಜನಿಕರು ಯಾವುದೇ ರೀತಿಯಲ್ಲಿ ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದ್ದಾರೆ.

ಕುಕಿ ಉಗ್ರಗಾಮಿಗಳು ಡ್ರೋನ್, ಬಾಂಬ್‌ಗಳು ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿ ಅಮಾಯಕ ಕೌತ್ರುಕ್ ಗ್ರಾಮಸ್ಥರ ಮೇಲೆ ದಾಳಿ ನಡೆಸಿದ ದುರದೃಷ್ಟಕರ ಘಟನೆಯ ಬಗ್ಗೆ ರಾಜ್ಯ ಸರ್ಕಾರಕ್ಕೆ ತಿಳಿದು ಬಂದಿದೆ. ನಿರಾಯುಧ ಗ್ರಾಮಸ್ಥರ ಮೇಲೆ ಭಯಭೀತಗೊಳಿಸುವ ಇಂತಹ ಕೃತ್ಯವನ್ನು ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸುತ್ತದೆ – ರಾಜ್ಯದಲ್ಲಿ ಸಹಜತೆ ಮತ್ತು ಶಾಂತಿಯನ್ನು ತರಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಮಣಿಪುರ ಗೃಹಸಚಿವಾಲಯ ಹೇಳಿದೆ.