Thursday, 24th October 2024

Gurpatwant Pannun : 2 ವರ್ಷಗಳಿಂದ ಭಾರತದ ಆಂತರಿಕ ಮಾಹಿತಿ ಕೆನಡಾಕ್ಕೆ ನೀಡುತ್ತಿದ್ದೇನೆ ಎಂದ ಖಲಿಸ್ತಾನಿ ಉಗ್ರ ಗುರ್‌ಪತ್ವಂತ್‌ ಪನ್ನುನ್‌

Gurpatwant Pannun

ಬೆಂಗಳೂರು: ಭಾರತ ಮತ್ತು ಕೆನಡಾ ಸಂಬಂಧ ಹದಗೆಡುತ್ತಿರುವ ನಡುವೆ ಕೆನಡಾದ ಸಿಬಿಸಿ ನ್ಯೂಸ್‌ನಲ್ಲಿಕಾಣಿಸಿಕೊಂಡ ಖಲಿಸ್ತಾನಿ ಉಗ್ರ ಗುರ್‌ಪತ್ವಂತ್ ಸಿಂಗ್ ಪನ್ನುನ್ (Gurpatwant Pannun) ಕಳೆದ 2-3 ವರ್ಷಗಳಿಂದ ಕೆನಡಾ ಪ್ರಧಾನಿ ಕಚೇರಿಯೊಂದಿಗೆ ಸಂವಹನ ನಡೆಸುತ್ತಿದ್ದು, ಭಾರತದ ಮಾಹಿತಿಗಳನ್ನುನೀಡುತ್ತಿದ್ದೇನೆ ಎಂದು ಹೇಳಿದ್ದಾನೆ.

ಭಯೋತ್ಪಾದಕ ಚಟುವಟಿಕೆಗಳ ಕಾರಣಕ್ಕೆ ಭಾರತದಲ್ಲಿ ನಿಷೇಧಕ್ಕೆ ಒಳಗಾಗಿರುವ ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆಯ ಪನ್ನುನ್ ಮಾತನಾಡಿ, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಹೇಳಿಕೆಯು ನ್ಯಾಯ, ಕಾನೂನಿನ ನಿಯಮ ಮತ್ತು ರಾಷ್ಟ್ರೀಯ ಭದ್ರತೆಗೆ ಕೆನಡಾದ ಅಚಲ ಬದ್ಧತೆಯನ್ನು ತೋರಿಸುತ್ತದೆ. ಸಿಖ್ಸ್ ಫಾರ್ ಜಸ್ಟೀಸ್ ಕಳೆದ 2-3 ವರ್ಷಗಳಿಂದ ಕೆನಡಾ ಪ್ರಧಾನಿ ಕಚೇರಿಯೊಂದಿಗೆ ಸಂವಹನ ನಡೆಸುತ್ತಿದೆ. ಭಾರತದಲ್ಲಿ ತನ್ನ ಎಲ್ಲ ಎಲ್ಲಾ ಬೇಹುಗಾರಿಕೆ ಜಾಲದ ಮಾಹಿತಿಯನ್ನು ರವಾನಿಸುತ್ತಿದೆ ಎಂದು ಹೇಳಿದ್ದಾನೆ.

ಹರ್ದೀಪ್ ಸಿಂಗ್ ನಿಜ್ಜರ್ ಅವರನ್ನು ಹತ್ಯೆ ಮಾಡಿದ ಭಾರತೀಯ ಏಜೆಂಟರಿಗೆ ಲಾಜಿಸ್ಟಿಕ್ಸ್ ಮತ್ತು ಗುಪ್ತಚರ ಬೆಂಬಲವನ್ನು ಒದಗಿಸುವ ಬೇಹುಗಾರಿಕೆ ಜಾಲಗಳನ್ನು ಭಾರತೀಯ ಹೈಕಮಿಷನರ್ ಸಂಜಯ್ ವರ್ಮಾ, ಅವರ ಎರಡನೇ ಕಮಾಂಡ್ ಮತ್ತು ಅವರಿಗಿಂತ ಮುಂಚಿನ ಅಧಿಕಾರಿ ಹೇಗೆ ರೂಪಿಸಿದರು ಎಂಬುದರ ಬಗ್ಗೆ ತಮ್ಮ ಸಂಸ್ಥೆ ಕೆನಡಾದ ಪ್ರಧಾನಿಗೆ ಮಾಹಿತಿ ನೀಡಿದೆ ಎಂದು ಪನ್ನುನ್ ಹೇಳಿದ್ದಾನೆ.

ಅಕ್ಟೋಬರ್ 14 ರಂದು ಭಾರತವು ಕೆನಡಾದ ಹೈಕಮಿಷನರ್ ಸಂಜಯ್ ವರ್ಮಾ ಮತ್ತು ಇತರ ಕೆಲವು ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಂಡಿದೆ. ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ತನಿಖೆಯಲ್ಲಿ ವರ್ಮಾ ಮತ್ತು ಇತರ ಕೆಲವು ರಾಜತಾಂತ್ರಿಕರನ್ನು ಕೆನಡಾ ‘ಹಿತಾಸಕ್ತಿಯ ವ್ಯಕ್ತಿಗಳು’ ಎಂದು ದೂರಿ ಅಪಮಾನ ಮಾಡಿದ ಬಳಿಕ ಈ ಬೆಳವಣಿಗೆ ನಡೆದಿದೆ.

ಸಿಬಿಸಿ ನ್ಯೂಸ್ ಸಂದರ್ಶನದಲ್ಲಿ ಮಾತನಾಡಿದ ಪನ್ನುನ್ ಇಂಡೋ-ಕೆನಡಿಯನ್ ಸಮುದಾಯವು ಕೆನಡಾದ ಸಂವಿಧಾನಕ್ಕೆ ನಿಷ್ಠವಾಗಿಲ್ಲ ಎಂಬುದಾಗಿಯೂ ಆರೋಪಿಸಿದ್ದಾನೆ. ಭಾರತದಲ್ಲಿ ಕುಟುಂಬ ಸಂಬಂಧಗಳನ್ನು ಹೊಂದಿರುವ ಈ ಇಂಡೋ-ಕೆನಡಿಯನ್ನರು ಕೆನಡಾದ ಸಂವಿಧಾನಕ್ಕೆ ನಿಷ್ಠರಾಗಿದ್ದಾರೆಯೇ ಅಥವಾ ಅವರು ಇನ್ನೂ ಭಾರತೀಯ ಸಂವಿಧಾನಕ್ಕೆ ತಮ್ಮ ಬದ್ಧತೆ ತೋರಿಸಲು ಬಯಸುತ್ತಾರೆಯೇ. ಏಕೆಂದರೆ ಹರ್ದೀಪ್ ನಿಜ್ಜರ್ ಹತ್ಯೆಯ ನಂತರ ಮೋದಿ ಆಡಳಿತವನ್ನು ಬೆಂಬಲಿಸುವ ಯಾವುದೇ ಇಂಡೋ-ಕೆನಡಿಯನ್ ಸಂಘಟನೆ ಬಹಿರಂಗವಾಗಿ ಹೇಳಿಕೆ ನೀಡಿಲ್ಲ. ಸೆಪ್ಟೆಂಬರ್ 18 (2023) ರಂದು ಪ್ರಧಾನಿ ಟ್ರುಡೊ ಬಹಿರಂಗವಾಗಿ ಹೊರಬಂದಾಗಿನಿಂದ ಅವರನ್ನು ಬೆಂಬಲಿಸದ ಕೆಲವು ಇಂಡೋ-ಕೆನಡಿಯನ್ ಸಂಸದರು ಅದರಲ್ಲಿದ್ದಾರೆ ಎಂದು ಪನ್ನುನ್ ಹೇಳಿದ್ದಾನೆ.

ಇದನ್ನು ಓದಿ: India Canada Row : ಭಾರತಕ್ಕೆ ಬೆದರಿದ ಕೆನಡಾ; ನಿಜ್ಜರ್‌ ಕೊಲೆಯಲ್ಲಿ ಭಾರತ ಭಾಗಿಯಾಗಿದ್ದಕ್ಕೆ ಸಾಕ್ಷಿಗಳೇ ಇಲ್ಲ ಎಂದ ಪ್ರಧಾನಿ ಟ್ರುಡೊ!

ಈ ಹಿಂದೆ, ಪನ್ನುನ್ ಇಂಡೋ-ಕೆನಡಿಯನ್ ಹಿಂದೂಗಳಿಗೆ ದೇಶವನ್ನು ತೊರೆದು ಭಾರತಕ್ಕೆ ಮರಳುವಂತೆ ಬೆದರಿಕೆ ಹಾಕಿದ್ದರು. “ಇಂಡೋ-ಕೆನಡಿಯನ್ ಹಿಂದೂಗಳೇ, ನೀವು ಕೆನಡಾ ಮತ್ತು ಕೆನಡಾದ ಸಂವಿಧಾನಕ್ಕೆ ನಿಮ್ಮ ನಿಷ್ಠೆತೋರಿಸುತ್ತಿಲ್ಲ. ನಿಮ್ಮ ಗಮ್ಯಸ್ಥಾನ ಭಾರತ. ಕೆನಡಾ ಬಿಟ್ಟು ಭಾರತಕ್ಕೆ ಹೋಗಿ” ಎಂದು ಬೆದರಿಕೆ ಹಾಕಿದ್ದ.