Saturday, 14th December 2024

ಧೋನಿ ಅಭಿಮಾನಿ ಪರೀಕ್ಷೆಯಲ್ಲಿ ಅನುತ್ತೀರ್ಣ: ಅಮಾನತು

ನವದೆಹಲಿ: ಶಾಲೆಯೊಂದರ ವಿದ್ಯಾರ್ಥಿ ಗಣಿತ ಪರೀಕ್ಷೆಯಲ್ಲಿ ಕೇಳಲಾದ ಎಲ್ಲ ಪ್ರಶ್ನೆಗಳಿಗೆ ‘ಥಾಲಾ’ ಎಂದು ಉತ್ತರಿಸಿದ್ದಕ್ಕಾಗಿ ಶಾಲೆಯಿಂದ ಆತನನ್ನು ಅಮಾನತು ಮಾಡಲಾಗಿದೆ.

ವಿದ್ಯಾರ್ಥಿ ಗಜೋಧರ್ ಗಣಿತ ಪರೀಕ್ಷೆಗೆ ಹಾಜರಾಗಿದ್ದ. ಎಲ್ಲ ಪ್ರಶ್ನೆಗಳಿಗೆ ತನ್ನ ಉತ್ತರ ಪತ್ರಿಕೆಯಲ್ಲಿ ‘ಥಾಲಾ’ ಎಂದು ಬರೆದಿದ್ದ. ತನ್ನ “ಐಡಲ್​” ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಗೌರವ ಸಲ್ಲಿಸಲು ಉತ್ತರ ಪತ್ರಿಕೆಯಲ್ಲಿ ಹೀಗೆ ಬರೆದಿರುವುದಾಗಿ ವಿದ್ಯಾರ್ಥಿ ಹೇಳಿರುವು ದಾಗಿ ಶಾಲೆಯ ಮೂಲಗಳು ತಿಳಿಸಿವೆ.

ಶಾಲೆಯ ಅಧಿಕಾರಿಯೊಬ್ಬರು ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಯಾವುದೇ ಶ್ರೇಷ್ಠ ವ್ಯಕ್ತಿಯ ಅಭಿಮಾನಿಯಾಗುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, “ಗಜೋಧರ್ ತನ್ನ ಪರೀಕ್ಷೆಯನ್ನು ಗಂಭೀರವಾಗಿ ತೆಗೆದುಕೊಳ್ಳದೇ ಈ ರೀತಿ ಮಾಡಿದ್ದು, ಕೆಟ್ಟ ನಡವಳಿಕೆಯಾಗುತ್ತದೆ. ಅಲ್ಲದೇ  ಪರೀಕ್ಷೆ ಯಲ್ಲಿ ಆತ ಅನುತ್ತೀರ್ಣನಾಗಿದ್ದಾನೆ. ಹೀಗಾಗಿ ಆ ವಿದ್ಯಾರ್ಥಿಯನ್ನು ಸದ್ಯ ಅಮಾನತು ಮಾಡಲಾಗಿದೆ ಎಂದಿದ್ದಾರೆ.

ಥಾಲಾ ಎಂಬುದು ತಮಿಳು ಪದವಾಗಿದ್ದು, ಇದರ ಅರ್ಥ ‘ನಾಯಕ’ ಎಂದಾಗುತ್ತದೆ. ತಮಿಳಿಗರು ತಮ್ಮ ನೆಚ್ಚಿನ ಅಥವಾ ಗೌರವಿಸುವ ವ್ಯಕ್ತಿಗೆ ಕರೆಯು ತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ನ ಪರ ಆಡುವ ಧೋನಿ ಶ್ರೇಷ್ಠ ಆಟಗಾರ ಮತ್ತು ನಾಯಕನಾಗಿರುವ ಕಾರಣ ಈ ಹೆಸರನ್ನು ಪಡೆದಿದ್ದಾರೆ.