Friday, 22nd November 2024

ದಿ ಕಾಶ್ಮೀರ್ ಫೈಲ್ಸ್ ಸಿನೆಮಾ ಪ್ರಚಾರಕ್ಕಾಗಿ ನಿರ್ಮಿಸಲಾಗಿದೆ: ’ರಾ’ ಮಾಜಿ ಮುಖ್ಯಸ್ಥ

ನವದೆಹಲಿ: “ದಿ ಕಾಶ್ಮೀರ್ ಫೈಲ್ಸ್ ಒಂದು ಪ್ರಚಾರದ ಚಲನಚಿತ್ರ, ಹಾಗಾಗಿ ಇದನ್ನು ನಾನು ವೀಕ್ಷಿಸುವುದಿಲ್ಲ” ಎಂದು ’ರಾ’ ಮಾಜಿ ಮುಖ್ಯಸ್ಥ ಎ.ಎಸ್.ದುಲತ್ ಹೇಳಿದ್ದಾರೆ.

“ಕಾಶ್ಮೀರಿ ಪಂಡಿತರನ್ನು ಟಾರ್ಗೆಟ್ ಮಾಡಲಾಗಿತ್ತು ಎಂಬ ಬಗ್ಗೆ ಸಂಶಯ ವಿಲ್ಲ. ಅವರಂತೆಯೇ, ಹಲವು ಜನರನ್ನು ಟಾರ್ಗೆಟ್ ಮಾಡಲಾ ಗಿತ್ತು, ಮುಸ್ಲಿಮರನ್ನೂ ಟಾರ್ಗೆಟ್ ಮಾಡಲಾಗಿತ್ತು” ಎಂದು ಹೇಳಿದ್ದಾಗಿ ವರದಿಯಾಗಿದೆ.

1990ರಲ್ಲಿ ನಡೆದ ಹತ್ಯೆಗಳ ಬಳಿಕ ಕಾಶ್ಮೀರಿ ಪಂಡಿತರು ಬೇರೆಡೆಗೆ, ಸ್ಥಳಾಂತರ ಹೊಂದಲು ಆರಂಭಿಸಿದ್ದರು. ಶ್ರೀಮಂತ ಕುಟುಂಬಗಳು ದಿಲ್ಲಿಗೆ ತೆರಳಿದರೆ, ಬಡವರು ಜಮ್ಮುವಿನಲ್ಲಿ ಆರಂಭಿಸಲಾದ ಶಿಬಿರಗಳಿಗೆ ತೆರಳಿದರು ಎಂದು ನೆನಪಿಸಿಕೊಂಡರು.

1989ರಲ್ಲಿ ಆಗಿನ ಗೃಹ ಸಚಿವ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ರುಬೈಯ್ಯಾ ಸಯೀದ್ ಅವರ ಅಪಹರಣ ಮತ್ತು ಆಕೆಯ ಬಿಡುಗಡೆಗಾಗಿ ಐದು ಜೆಕೆಎಲ್‍ಎಫ್ ಉಗ್ರರ ಬಿಡುಗಡೆಯ ನಂತರ ಎಲ್ಲವೂ ಬದಲಾಯಿತು. ನಂತರ ಅಲ್ಲಿ ಬಹಳಷ್ಟು ರಕ್ತಪಾತವಾಗಿತ್ತು ಎಂದು ಆಗಿನ ಕಾಶ್ಮೀರದಲ್ಲಿ ಗುಪ್ತಚರ ಬ್ಯುರೋ ಮುಖ್ಯಸ್ಥ ರಾಗಿ ಸೇವೆ ಸಲ್ಲಿಸುತ್ತಿದ್ದ ದುಲತ್ ಹೇಳುತ್ತಾರೆ.

ಕಾಶ್ಮೀರ ಬಿಟ್ಟು ತೆರಳುವಷ್ಟು ಆರ್ಥಿಕವಾಗಿ ಸಬಲರಾಗಿದ್ದ ಮುಸ್ಲಿಂ ಕುಟುಂಬಗಳೂ ದಿಲ್ಲಿ ಮುಂತಾದೆಡೆ ತೆರಳಿದರು. ಪಂಡಿತರಿಗಿಂತಲೂ ಹೆಚ್ಚು ಮುಸ್ಲಿಮರು ಕಾಶ್ಮಿರ ಬಿಟ್ಟು ತೆರಳಿದ್ದರು. ಹಲವರ ಹತ್ಯೆಯೂ ನಡೆದಿತ್ತು” ಎಂದು ಹೇಳುತ್ತಾರೆ.

370ನೇ ವಿಧಿ ರದ್ದತಿ ನಂತರವೂ ಕಾಶ್ಮೀರಿ ಪಂಡಿತರನ್ನು ಟಾರ್ಗೆಟ್ ಮಾಡಲಾಗಿಲ್ಲ ಎಂದು ಹೇಳಿದರು.