Sunday, 15th December 2024

ಕೆಎಸ್‌ಆರ್‌ಟಿಸಿ ಬಸ್‌ಗಳ ಅಪಘಾತ: 30 ಜನರಿಗೆ ಗಾಯ

ತಿರುವನಂತಪುರಂ: ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 30 ಜನರು ಗಂಭೀರವಾಗಿ ಗಾಯಗೊಂಡಿ ರುವ ಘಟನೆ ತಿರುವನಂತಪುರಂ-ನಾಗರ್‌ಕೋಯಿಲ್ ಹೆದ್ದಾರಿಯ ನೆಯ್ಯಟ್ಟಿಂಕರಾದ ಮೂನ್ನುಕಲ್ಲಿಮೂಡು ಎಂಬಲ್ಲಿ ಸಂಭವಿಸಿದೆ.

ಅಪಘಾತದಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎರಡು ಬಸ್ಸಿನ ಚಾಲಕರಾದ ಅನಿಲ್ ಕುಮಾರ್ ಮತ್ತು ಎಂ ಎಸ್ ಸುನಿ ಅವರು ಬಸ್ಸಿನೊಳಗೆ ಸಿಲುಕಿಕೊಂಡಿದ್ದು ಅಗ್ನಿಶಾಮಕ ತಂಡ ಹಾಗೂ ರಕ್ಷಣಾ ತಂಡದ ಕಾರ್ಯಾಚರಣೆಯ ಬಳಿಕ ಇಬ್ಬರನ್ನು ಹೊರ ತೆಗೆಯಲಾಯಿತು. ಡಿಕ್ಕಿಯ ರಭಸಕ್ಕೆ ಎರಡು ಬಸ್‌ಗಳ ಮುಂಭಾಗ ತೀವ್ರ ಜಖಂಗೊಂಡಿದೆ.

ತಿರುವನಂತಪುರದಿಂದ ನೆಯ್ಯಟ್ಟಿಂಕರಕ್ಕೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಬೇರೊಂದು ವಾಹನವನ್ನು ಓವರ್‌ಟೇಕ್‌ ಮಾಡುವ ಭರದಲ್ಲಿ ಎದುರುಗಡೆ ಯಿಂದ ಬರುತ್ತಿದ್ದ ಮತ್ತೊಂದು ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದ ವೇಳೆ ಎರಡೂ ಬಸ್ಸುಗಳು ಅತಿವೇಗದಲ್ಲಿ ಚಲಿಸುತ್ತಿದ್ದವು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಘಟನೆಯಲ್ಲಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಿಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.