Sunday, 13th October 2024

ಮಾಜಿ ಮುಖ್ಯ ಕಾರ್ಯದರ್ಶಿಗೆ ಜೀವ ಬೆದರಿಕೆ: ಮೂವರ ಬಂಧನ

ಕೊಲ್ಕತ್ತಾ: ಮಾಜಿ ಮುಖ್ಯ ಕಾರ್ಯದರ್ಶಿ ಅಲ್ಪಾನ್ ಬಂಡೋಪಾಧ್ಯಾಯ ಅವರಿಗೆ ಜೀವ ಬೆದರಿಕೆ ಹಾಕಿದ್ದ ವೈದ್ಯ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ದುಷ್ಕರ್ಮಿಗಳು ಕೆಲ ದಿನಗಳ ಹಿಂದೆ ಬಂಡೋಪಾಧ್ಯಾಯ ಅವರ ಪತ್ನಿಗೆ ಪತ್ರ ಬರೆದು ಜೀವ ಬೆದರಿಕೆ ಹಾಕಿದ್ದರು.

ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದ ಪೊಲೀಸರು ದೊರೆತ ಖಚಿತ ಮಾಹಿತಿ ಮೇರೆಗೆ ಮೊದಲು ಟೈಪಿಸ್ಟ್ ಒಬ್ಬರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದರು. ಆತನ ಮಾಹಿತಿ ಮೇರೆಗೆ ಸಮೀಪದ ವೈದ್ಯಕೀಯ ಕಾಲೇಜೊಂದರಲ್ಲಿ ವೈದ್ಯ ಹಾಗೂ ಆತನ ಕಾರು ಚಾಲಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರು ಬಂಧಿಸಲ್ಪಟ್ಟಿರುವ ವೈದ್ಯನ ಮಾನಸಿಕ ಸ್ಥಿತಿ ಸ್ಥಿಮಿತದಲ್ಲಿಲ್ಲ ಎನ್ನಲಾಗಿದೆ. ಆತ ತನ್ನ ಚಾಲಕನಿಗೆ ಪತ್ರ ಬರೆದು ಕೊಟ್ಟು ಅದನ್ನು ಈಗಾಗಲೇ ಬಂಧಿಸಲ್ಪಟ್ಟಿರುವ ಟೈಪಿಸ್ಟ್ ಮೂಲಕ ಟೈಪ್ ಮಾಡಿಸಿ ಕೆಲವರಿಗೆ ಜೀವ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.

ಹಲವಾರು ವ್ಯಕ್ತಿಗಳಿಗೆ ಇದೇ ರೀತಿಯ ಬೆದರಿಕೆ ಹಾಕಿದ್ದ ಎನ್ನಲಾಗಿದ್ದು, ಬಂಧಿತ ವೈದ್ಯನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.