Friday, 22nd November 2024

ಭಯೋತ್ಪಾದಕ ದಾಳಿ ಸಂಚು ವಿಫಲ: ಮೂವರ ಬಂಧನ

ನವದೆಹಲಿ: ಶನಿವಾರ ಜಮ್ಮು-ಕಾಶ್ಮೀರದ ಪೊಲೀಸರು ಭಯೋತ್ಪಾದಕ ದಾಳಿ ಸಂಚನ್ನು ವಿಫಲ ಗೊಳಿಸಿದ್ದು, ದ ರೆಸಿಸ್ಟೆನ್ಸ್ ಫ್ರಂಟ್ ಹಾಗೂ ಲಷ್ಕರ್ ಎ  ತೊಯ್ಬಾ ಸಂಘಟನೆ ಜತೆ ಸಂಪರ್ಕ ಹೊಂದಿರುವ ಮೂವರನ್ನು ಬಂಧಿಸಲಾಗಿದೆ.

ಶುಹಾಮಾ ಪ್ರದೇಶದಲ್ಲಿ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಗಂದೇರ್ಬಾಲ್ ಪೊಲೀಸರು, ಸಿಆರ್ ಪಿಎಫ್ ಜಂಟಿಯಾಗಿ ಮೂವರು ಶಂಕಿತ ಉಗ್ರರನ್ನು ಬಂಧಿಸಿದ್ದು, ಶಸ್ತ್ರಾಸ್ತ್ರ, ಸ್ಫೋಟಕ ಗಳನ್ನು ವಶಪಡಿಸಿಕೊಂಡಿರುವುದಾಗಿ ವರದಿ ಹೇಳಿದೆ.

ಬಂಧಿತ ಉಗ್ರರನ್ನು ಶೋಪಿಯಾನ್’ನ ಫೈಸಲ್ ಮಂಝೂರ್, ಝೈಪೋರಾ ಶೋಪಿಯಾನ್ ನ ಅಝಾರ್ ಯಾಕೂಬ್ ಮತ್ತು ಬೇಗಂ ಕುಲ್ಗಾಮ್ ನ ನಾಸಿರ್ ಅಹ್ಮದ್ ಎಂದು ಗುರುತಿಸಲಾಗಿದೆ. ಉಗ್ರರ ಬಳಿ ಇದ್ದ ಎರಡು ಚೀನಾ ನಿರ್ಮಿತ ಪಿಸ್ತೂಲ್, ಮೂರು ಮ್ಯಾಗಝೈನ್ಸ್, ಎರಡು ಹ್ಯಾಂಡ್ ಗ್ರೆನೇಡ್, ಮೂರು ಮೊಬೈಲ್ ಫೋನ್ ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಸಂಬಂಧಿಸಿದ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದಾಗಿ ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದು ಬಂದಿದೆ.