Thursday, 12th December 2024

ತಿರುಪತಿ ದೇವಸ್ಥಾನದಲ್ಲಿ ಅನ್ನಪ್ರಸಾದ ಯೋಜನೆಗೆ ದೇಣಿಗೆ ಮೊತ್ತ ಹೆಚ್ಚಳ

ತಿರುಮಲ: ತಿರುಪತಿ ದೇವಸ್ಥಾನದಲ್ಲಿ ಒಂದು ದಿನದ ಅನ್ನಪ್ರಸಾದ ಯೋಜನೆಗೆ ದೇಣಿಗೆ ಮೊತ್ತವನ್ನು ಹೆಚ್ಚಿಸಲಾಗಿದೆ.

ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಅನ್ನಪ್ರಸಾದ ಯೋಜನೆಗೆ ಪ್ರಸ್ತುತ ಒಂದು ದಿನಕ್ಕೆ 33 ಲಕ್ಷದಿಂದ 38 ಲಕ್ಷ ರೂಪಾಯಿ ಮೊತ್ತವನ್ನು ಹೆಚ್ಚಿಸಿದೆ.

ತಿರುಪತಿಯ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಪ್ರತಿನಿತ್ಯ ದರ್ಶನಕ್ಕೆ ಬರುವ ಸಾವಿರಾರು ಭಕ್ತರಿಗೆ ಟಿಟಿಡಿಯ ಅನ್ನ ಪ್ರಸಾದ ವಿಭಾಗ ಉಚಿತ ಆಹಾರ ವನ್ನು ಒದಗಿಸುತ್ತದೆ. ಟಿಟಿಡಿಯಲ್ಲಿರುವ ವೆಂಕಟೇಶ್ವರ ಅನ್ನ ಪ್ರಸಾದ ಟ್ರಸ್ಟ್ ಈ ಉದ್ದೇಶಕ್ಕಾಗಿ ನಗದು ಮತ್ತು ವಸ್ತು ಎರಡರಲ್ಲೂ ಗಣನೀಯ ದೇಣಿಗೆ ಗಳನ್ನು ಸ್ವೀಕರಿಸುತ್ತದೆ.

ಒಂದು ದಿನದ ಟಿಟಿಡಿಯ ಬೆಳಗಿನ ಉಪಹಾರ ಸೇವೆಗೆ ದಾನ ಮಾಡುವ ದಾನಿಗಳಿಗೆ 6 ಲಕ್ಷದ ಬದಲು 8 ಲಕ್ಷ ಹೆಚ್ಚಿಸಲಾಗಿದೆ. ಮಧ್ಯಾಹ್ನ ಮತ್ತು ರಾತ್ರಿಯ ಎರಡೂ ಸೇವೆಗಳಿಗೆ 10 ಲಕ್ಷದ ಬದಲು ತಲಾ 15 ಲಕ್ಷ ಹೆಚ್ಚಾಗಿದೆ. ಯೋಜನೆಗಳಿಗೆ ದೇಣಿಗೆ ನೀಡುವ ಜನರ ಹೆಸರನ್ನು ಈಗ ತಿರುಮಲದಲ್ಲಿರುವ ಅನ್ನಪ್ರಸಾದ ಸಂಕೀರ್ಣದಲ್ಲಿ ಪ್ರದರ್ಶಿಸಲಾಗುತ್ತದೆ.

1985 ರಲ್ಲಿ ಟ್ರಸ್ಟ್‌ ದೇಣಿಗೆ ಸಂಗ್ರಹ ಪ್ರಾರಂಭವಾದಾಗಿನಿಂದ ಅತೀ ಹೆಚ್ಚು ಅಂದರೆ 1,500 ಕೋಟಿ ದೇಣಿಗೆ ಸಂಗ್ರಹಿಸಿದೆ. ಈಗ ಅನ್ನಪ್ರಸಾದ ಯೋಜನೆಯು ಟಿಟಿಡಿ ಇದುವರೆಗೆ ನಡೆಸುತ್ತಿರುವ ದೊಡ್ಡ ಯೋಜನೆಗಳಲ್ಲಿ ಒಂದಾಗಿದೆ.