Sunday, 15th December 2024

ತಿರುಮಲದ ಅರಣ್ಯ ಪ್ರದೇಶದಲ್ಲಿ ಬೆಂಕಿ

ತಿರುಮಲ: ಪ್ರಸಿದ್ಧ ಪುಣ್ಯಕ್ಷೇತ್ರ ತಿರುಮಲದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ.

ತಿರುಮಲದಿಂದ ಪಾಪ ವಿನಾಶನಕ್ಕೆ ತೆರಳುವ ಮಾರ್ಗದಲ್ಲಿ ಪಾರ್ವತಿ ಮಂಟಪದಿಂದ ಅನತಿ ದೂರದಲ್ಲಿರುವ ಅರಣ್ಯ ಪ್ರದೇಶ ದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದಾಗಿ ಬೆಂಕಿ ದೊಡ್ಡ ಪ್ರಮಾಣದಲ್ಲಿ ವ್ಯಾಪಿಸಿತ್ತು. ಟಿಟಿಡಿ ಅರಣ್ಯ ಮತ್ತು ವನ್ಯಜೀವಿ ಅಧಿಕಾರಿಗಳು ತಕ್ಷಣ ಎಚ್ಚೆತ್ತು ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರು. ಪೊಲೀಸರು ಕೂಡ ಅಗ್ನಿಶಾಮಕ ಯಂತ್ರ ಗಳೊಂದಿಗೆ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಿಸಲು ಆರಂಭಿಸಿದರು.

ತಿರುಪತಿ ಜಿಲ್ಲೆಯ ತಿರುಮಲ ಪಾರ್ವೇತಿ ಮಂಟಪದ ಬಳಿ ಕಾಣಿಸಿಕೊಂಡ ಬೆಂಕಿಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಈ ಪ್ರದೇಶದಲ್ಲಿ ಮೊದಲು ಕಾಣಿಸಿಕೊಂಡ ಬೆಂಕಿ ವೇಗವಾಗಿ ಹರಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ಹರಡಿದ ಬೆನ್ನಲ್ಲೇ ಅಧಿಕಾರಿಗಳು ಸ್ಥಳೀಯ ವನ್ಯಜೀವಿಗಳ ರಕ್ಷಣೆಯ ಕುರಿತು ಎಚ್ಚರಿಕೆಯನ್ನೂ ನೀಡಿದ್ದಾರೆ.

ಪ್ರಸ್ತುತ ಬಿರು ಬೇಸಿಗೆಯಲ್ಲಿ ವ್ಯಾಪಿಸಿರುವ ತೀವ್ರವಾದ ಶಾಖದ ಅಲೆಯ ಪರಿಣಾಮವಾಗಿ ಬೆಂಕಿಯು ಸಂಭವಿಸಿರಬಹುದು. ಬೆಂಕಿ ನಂದಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅರಣ್ಯ ಪ್ರದೇಶದಲ್ಲಿ ಬೆಂಕಿ ಹರಡದಂತೆ ತಡೆಯಲು ಮಣ್ಣಿನ ರಸ್ತೆಗಳು ಮತ್ತು ಮಧ್ಯದಲ್ಲಿರುವ ಒಣಗಿದ ಮರಗಳನ್ನು ಸಹ ತೆಗೆದುಹಾಕಲಾಯಿತು.