Monday, 16th September 2024

ನಾಳೆಯಿಂದ 22ರವರೆಗೆ ತಿಮ್ಮಪ್ಪನ ದೇಗುಲದಲ್ಲಿ ದರ್ಶನ

ತಿರುಮಲ: ತಿರುಮಲ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಜ.13 ರಂದು ವೈಕುಂಠ ಏಕಾದಶಿ, ಜ.14 ರಂದು ವೈಕುಂಠ ದ್ವಾದಶಿ ಕೈಂಕರ್ಯಗಳು ನಡೆಯಲಿವೆ. ಈ ಸಂದರ್ಭದಲ್ಲಿ ಬುಧವಾರ ಮಧ್ಯರಾತ್ರಿ ನಂತರ ವೈಕುಂಠ ದ್ವಾರಗಳು ತೆರೆಯಲಿವೆ.

ಧನುರ್ಮಾಸದ ಸಂದರ್ಭದಲ್ಲಿ, ಮಧ್ಯರಾತ್ರಿ ನಂತರ ಏಕಾಂತದಲ್ಲಿ ಧನುರ್ಮಾಸ ವಿಧಿಗಳನ್ನು ಅರ್ಚಕರು ನಿರ್ವಹಿಸಲಿದ್ದಾರೆ. ನಂತರ 1.45 ಗಂಟೆಗೆ ಭಕ್ತಾದಿಗಳು ವೈಕುಂಠ ದ್ವಾರ ದರ್ಶನಕ್ಕೆ ಅನುಮತಿ ನೀಡಲಿದ್ದಾರೆ.

ತಿರುಮಲದ ಇತಿಹಾಸದಲ್ಲಿಯೇ ಕಳೆದ ವರ್ಷ ಮೊದಲ ಬಾರಿಗೆ ಹತ್ತು ದಿನಗಳ ಕಾಲ ವೈಕುಂಠ ದ್ವಾರ ತೆರೆದು ಭಕ್ತರಿಗೆ ದರ್ಶನ ಕಲ್ಪಿಸಿತ್ತು. ಈ ಬಾರಿಯೂ ಇದೇ 13 ರಿಂದ 22ರವರೆಗೆ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲು ಟಿಟಿಡಿ ನಿರ್ಧರಿಸಿದೆ. ಈ ಹಿನ್ನಲೆಯಲ್ಲಿ ಟಿಟಿಡಿ ಈಗಾಗಲೇ ಭಕ್ತರಿಗೆ 300 ರೂಪಾಯಿ ವಿಶೇಷ ಪ್ರವೇಶ ದರ್ಶನ, ಶ್ರೀವಾಣಿ ಬ್ರೇಕ್ ದರ್ಶನ ಟಿಕೆಟ್, ವರ್ಚುವಲ್ ಸೇವಾ ಟಿಕೆಟ್‌ಗಳನ್ನು ನಿಗದಿಪಡಿಸಿದೆ.

13 ರಂದು ಬೆಳಗ್ಗೆ 9 ರಿಂದ 10ರವರೆಗೆ ಶ್ರೀದೇವಿ- ಭೂದೇವಿ ಸಮೇತ ಮಲಯಪ್ಪಸ್ವಾಮಿಯ ಸ್ವರ್ಣ ರಥ ದೇವಸ್ಥಾನದ ಆವರಣದಲ್ಲಿ ಮೆರವಣಿಗೆ ನಡೆಯಲಿದೆ. ವೈಕುಂಠ ಏಕಾದಶಿ ನಿಮಿತ್ತ ಮಂಗಳವಾರ ತಿಮ್ಮಪ್ಪ ದೇಗುಲದಲ್ಲಿ ತಿರುಮಂಜನ (ದೇವಸ್ಥಾನದ ಶುದ್ಧೀಕರಣ) ನಡೆಯಲಿದೆ. ಬಳಿಕ ಭಕ್ತರಿಗೆ ದರ್ಶನ ಪ್ರಾರಂಭ ವಾಗುತ್ತದೆ.