Sunday, 22nd September 2024

Tirupati Laddoo Row: ತಿರುಪತಿ ಲಡ್ಡು ಪ್ರಸಾದ ವಿವಾದ; ಪ್ರಧಾನಿಗೆ ಪತ್ರ ಬರೆದ ಜಗನ್

tirupati laddoo

ಹೈದರಾಬಾದ್‌: ತಿರುಪತಿ ದೇಗುಲದ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಕಲಬೆರಕೆ (Tirupati Laddoo Row)ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಮಾಜಿ ಸಿಎಂ ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ(Y.S. Jagan Mohan Reddy) ಪ್ರಧಾನಿ ನರೇಂದ್ರ ಮೋದಿ(Narendra Modi)ಯವರಿಗೆ ಪತ್ರ ಬರೆದಿದ್ದಾರೆ. ಸಿಎಂ ಎನ್‌. ಚಂದ್ರಬಾಬು ನಾಯ್ಡು(Y.S. Jagan Mohan Reddy) ತಮ್ಮ ವಿರುದ್ಧ ಸುಳ್ಳು ಆರೋಪ ಹೊರಿಸುತ್ತಿದ್ದಾರೆ ಎಂದು ಜಗನ್‌ ಮೋಹನ್‌ ರೆಡ್ಡಿ ಪತ್ರದಲ್ಲಿ ತಿಳಿಸಿದ್ದಾರೆ.

ಜಗನ್‌ ಮೋಹನ್‌ ರೆಡ್ಡಿ ತಾವು ಬರೆದ ಪತ್ರದಲ್ಲಿ, ತಮ್ಮ ಸರ್ಕಾರ ಮೇಲೆ ಎಲ್ಲಿ ಆಪಾದನೆ ಬರುತ್ತದೋ ಎಂದು ಹೆದರಿ ಚಂದ್ರಬಾಬು ನಾಯ್ಡು ಸುಖಾ ಸುಮ್ಮನೆ ಬೇರೆಯವರ ಮೇಲೆ ಆರೋಪ ಮಾಡುತ್ತಿದ್ದಾರೆ. ರಾಜಕೀಯ ದುರುದ್ದೇಶದಿಂದ ತಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಇಂತಹ ಸುಳ್ಳು ಪ್ರಚಾರವು ದೇವಾಲಯದ ಜಾಗತಿಕ ಖ್ಯಾತಿ ಮತ್ತು ಧಾರ್ಮಿಕ ಪಾವಿತ್ರ್ಯತೆಗೆ ತೀವ್ರ ಹಾನಿಯನ್ನುಂಟುಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.

ತಿರುಪತಿ ದೇಗುಲದ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಕಲಬೆರಕೆ (Tirupati Laddoo Row) ಆಗಿರುವುದಕ್ಕೆ ಭಗವಂತ ವೆಂಕಟೇಶ್ವರನನ್ನು ಸಂತೈಸಲು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್(Pawan Kalyan) 11 ದಿನಗಳ ಕಠಿಣ ಪ್ರಾಯಶ್ಚಿತ ವೃತವನ್ನು ಇಂದಿನಿಂದ ಆರಂಭಿಸಿದ್ದಾರೆ. 11 ದಿನಗಳ ಕಠಿಣ ವೃತಾಚರಣೆ ಬಳಿಕ ತಿಮ್ಮಪ್ಪನ ಸನ್ನಿಧಿಗೆ ಭೇಟಿ ನೀಡುವುದಾಗಿ ಅವರು ಘೋಷಿಸಿದ್ದಾರೆ.

ಅವರು ಇಂದು ಗುಂಟೂರು ಜಿಲ್ಲೆಯ ನಮ್ಮೂರಿನ ಶ್ರೀ ದಶಾವತಾರ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಈ ಪಾಪ ಪ್ರಾಯಶ್ಚಿತ ಕಾರ್ಯವನ್ನು ಆರಂಭಿಸಿದ್ದಾರೆ. ಇದು ಪೂರ್ಣಗೊಂಡ ಬಳಿಕ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ದರ್ಶನ ಪಡೆಯಲಿದ್ದಾರೆ.

ಏನಿದು ಪ್ರಕರಣ?

ಕೋಟ್ಯಂತರ ಭಕ್ತರು ಭೇಟಿ ನೀಡುವ ತಿರುಪತಿ ತಿರುಮಲ ದೇವಸ್ಥಾನದಲ್ಲಿ ನೀಡಲಾಗುವ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು (Beef Fat) ಮತ್ತು ಮೀನಿನ ಎಣ್ಣೆ (Fish Fat) ಬೆರೆಸಲಾಗಿದೆ ಎಂಬ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಆರೋಪ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು.

ವೈಎಸ್‌ಆರ್‌ಪಿ ಅಧಿಕಾರದಲ್ಲಿದ್ದಾಗ ತಿರುಪತಿ ಲಡ್ಡುಗಳನ್ನು ತಯಾರಿಸಲು ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಕಂಡುಬಂದಿದೆ ಎಂದು ಗುಜರಾತ್‌ನ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ಪ್ರಯೋಗಾಲಯದಿಂದ ಬುಧವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ. ತುಪ್ಪದಲ್ಲಿ ಮೀನಿನ ಎಣ್ಣೆ, ದನದ ಮಾಂಸ ಟಾಲೋ ಮತ್ತು ಹಂದಿಮಾಂಸದ ಕುರುಹುಗಳಿವೆ ಎಂದು ವರದಿ ಸೂಚಿಸಿದೆ.

ಕರ್ನಾಟಕ ಹಾಲು ಒಕ್ಕೂಟ (KMF) ಈ ವಿವಾದಕ್ಕೆ ಸಂಬಂಧಪಟ್ಟಂತೆ ಗುರುವಾರ ಸ್ಪಷ್ಟನೆ ನೀಡಿದೆ. ಈ ಬಗ್ಗೆ ಹೇಳಿಕೆ ಪ್ರಕಟಿಸಿರುವ ಕೆಎಂಎಫ್, ‘ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಮಂಡಳಿಯು ಕಳೆದ ನಾಲ್ಕು ವರ್ಷಗಳಿಂದ ತಮ್ಮಿಂದ (ಕೆಎಂಎಫ್‌) ತುಪ್ಪವನ್ನು ಖರೀದಿಸಿಲ್ಲ’ ಎಂದು ಸ್ಪಷ್ಟನೆ ನೀಡಿದೆ. ಚಂದ್ರಬಾಬು ನಾಯ್ಡು ಆರೋಪಕ್ಕೆ ಸಂಬಂಧಿಸಿದಂತೆ ವರದಿಯನ್ನು ಟಿಡಿಪಿ (TDP) ಬಹಿರಂಗಪಡಿಸಿದೆ.

ಈ ಸುದ್ದಿಯನ್ನೂ ಓದಿ: Tirupati Laddoo Row : ತಿರುಪತಿ ಲಡ್ಡುವಿನಲ್ಲಿ ಬೀಫ್‌ ಕೊಬ್ಬು, 11 ದಿನಗಳ ಪ್ರಾಯಶ್ಚಿತಕ್ಕೆ ಮುಂದಾದ ಡಿಸಿಎಂ ಪವನ್ ಕಲ್ಯಾಣ್‌