Saturday, 21st September 2024

Tirupati Laddoo: ಗೋಮಾಂಸ ಟ್ಯಾಲೋ ಎಂದರೇನು, ಇದನ್ನು ಹೇಗೆ ತಯಾರಿಸಲಾಗುತ್ತದೆ?

Tirupati Laddoo

ತಿರುಪತಿ ದೇವಾಲಯದಲ್ಲಿ ದೇವರಿಗೆ ನೈವೇದ್ಯ ಮಾಡುವ ಮತ್ತು ಭಕ್ತರಿಗೆ ವಿತರಿಸಲಾಗುವ ಲಡ್ಡುಗಳಿಗೆ (Tirupati Laddoo) ಬಳಸುವ ತುಪ್ಪದಲ್ಲಿ (Ghee) ದನ (Beef), ಹಂದಿ (pigs) ಮಾಂಸದ ಕೊಬ್ಬು, ಮೀನು ಹಾಗೂ ತಾಳೆ ಎಣ್ಣೆ ಅಂಶಗಳು ಇರುವುದು ಪ್ರಯೋಗಾಲಯದ ಮಾದರಿ ಪರೀಕ್ಷೆಯಲ್ಲಿ ಪತ್ತೆಯಾಗಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.

ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ತಿರುಪತಿ ದೇಗುಲದಲ್ಲಿ ನೀಡಲಾಗಿದ್ದ ಲಡ್ಡುಗಳಲ್ಲಿ ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೇ ಆರೋಪಿಸಿರುವುದು ಪಕ್ಷ ಮತ್ತು ವಿಪಕ್ಷಗಳ ನಡುವೆ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿದೆ.

ಪ್ರಯೋಗಾಲಯ ವರದಿ ಏನು ಹೇಳಿದೆ?

ತಿರುಪತಿ ಲಡ್ಡು ಮಾದರಿಯನ್ನು ಗುಜರಾತ್ ಮೂಲದ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗಿದೆ. ಇದಕ್ಕೆ ಮಾದರಿಯನ್ನು 2024ರ ಜುಲೈ 9ರಂದು ಸಂಗ್ರಹಿಸಿದ್ದು, ಜುಲೈ 16ರಂದು ಪರೀಕ್ಷಾ ವರದಿ ನೀಡಲಾಗಿದೆ. ಪ್ರಯೋಗಾಲಯದ ವರದಿಯಲ್ಲಿ ತಿರುಪತಿ ಲಡ್ಡುಗಳಲ್ಲಿ ಲಾರ್ಡ್, ಬೀಫ್ ಟ್ಯಾಲೋ ಮತ್ತು ಮೀನಿನ ಎಣ್ಣೆ ಇರುವುದು ಪತ್ತೆಯಾಗಿದೆ.

Tirupati Laddoo

ಏನಿದು ಬೀಫ್ ಟ್ಯಾಲೋ?

ಗೋವಿನ ಅಂಗಾಂಶದಿಂದ ಹೊರತೆಗೆಯಲಾದ ಕೊಬ್ಬನ್ನು ಗೋಮಾಂಸ ಟ್ಯಾಲೋ ಎನ್ನಲಾಗುತ್ತದೆ. ಇದನ್ನು ಮಾಂಸದಿಂದ ಕೆನೆ ತೆಗೆದ ಕೊಬ್ಬನ್ನು ಬಿಸಿ ಮಾಡಿ ಕರಗಿಸುವ ಮೂಲಕ ತಯಾರಿಸಲಾಗುತ್ತದೆ. ಇದನ್ನು ತಂಪಾಗಿಸಿದಾಗ ಬೆಣ್ಣೆಯಂತಹ ವಸ್ತುವಾಗಿ ಬದಲಾಗುತ್ತದೆ.

ಲಾರ್ಡ್ ಟ್ಯಾಲೋ ಎಂದರೇನು?

ಲಾರ್ಡ್ ಟ್ಯಾಲೋ ಅನ್ನು ಹಂದಿಗಳ ಮಾಂಸದಿಂದ ತಯಾರಿಸಲಾಗುತ್ತದೆ. ಇದು ಕೂಡ ಬೆಣ್ಣೆಯಂತೆ ಇರುತ್ತದೆ. ಹಂದಿಗಳಲ್ಲಿ ಕೊಬ್ಬು ಇರುವ ಅಂಗಾಂಶವನ್ನು ಕರಗಿಸುವ ಮೂಲಕ ಉತ್ಪಾದಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಅಡುಗೆ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.

ಟಿಡಿಪಿ ವಕ್ತಾರರು ಹೇಳಿದ್ದೇನು?

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಟಿಡಿಪಿ ವಕ್ತಾರ ಆನಂ ವೆಂಕಟ ರಮಣ ರೆಡ್ಡಿ ಪ್ರಯೋಗಾಲಯದ ವರದಿಯನ್ನು ಪ್ರದರ್ಶಿಸಿ ತುಪ್ಪದ ಮಾದರಿಯಲ್ಲಿ “ಗೋಮಾಂಸ ಟ್ಯಾಲೋ” ಇರುವುದನ್ನು ದೃಢಪಡಿಸಿದೆ ಎಂದು ಹೇಳಿದ್ದರು. ತಿರುಮಲಕ್ಕೆ ಸರಬರಾಜಾಗುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆಯನ್ನು ಬಳಸಿರುವುದನ್ನು ಪ್ರಯೋಗಾಲಯ ವರದಿಗಳು ಪ್ರಮಾಣೀಕರಿಸುತ್ತವೆ ಮತ್ತು ಇದರ ಎಸ್ ಪ್ರಮಾಣವು (sap value) 19.7 ಆಗಿದೆ ಎಂದು ತಿಳಿಸಿದ್ದರು.

Tirupati Laddoo

ವೈಎಸ್‌ಆರ್‌ಸಿಪಿ ಪಕ್ಷ ಏನು ಹೇಳಿದೆ?

ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ ಈ ಆರೋಪಗಳನ್ನು ನಿರಾಕರಿಸಿದೆ. ನಾಯ್ಡು ಅವರು ರಾಜಕೀಯ ಲಾಭಕ್ಕಾಗಿ “ಹೇಯ ಆರೋಪ”ದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದೆ. ನಾಲ್ಕು ವರ್ಷಗಳ ಕಾಲ ಟಿಟಿಡಿಯ ಅಧ್ಯಕ್ಷರಾಗಿದ್ದ ವೈಎಸ್‌ಆರ್‌ಸಿಪಿಯ ಹಿರಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ವೈ.ವಿ. ಸುಬ್ಬಾ ರೆಡ್ಡಿ ಅವರು, ಚಂದ್ರಬಾಬು ನಾಯ್ಡು ಅವರ ಆರೋಪಗಳು ದೇವರು ಮತ್ತು ದೇವಾಲಯದ ಪವಿತ್ರ ಸ್ವರೂಪವನ್ನು ಹಾಳುಮಾಡಿದೆ. ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಹೇಳಿದ್ದಾರೆ.

ದೇವರಿಗೆ ಅರ್ಪಿಸುವ ನೈವೇದ್ಯ ಹಾಗೂ ಭಕ್ತಾದಿಗಳಿಗೆ ನೀಡುವ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಹೇಳುವುದು ಅಸಹ್ಯ. ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿದೆ ಎಂದು ಆರೋಪಿಸುವುದಕ್ಕಿಂತ ಹೇಯ ಪ್ರಯತ್ನ ಮತ್ತೊಂದಿಲ್ಲ ಎಂದು ಸುಬ್ಬಾ ರೆಡ್ಡಿ ಹೇಳಿದ್ದಾರೆ.

Tirupati Laddoo Row : ದೇವರ ಹೆಸರಲ್ಲಿ ರಾಜಕೀಯ; ನಾಯ್ಡು ವಿರುದ್ಧ ಟೀಕೆ ಮಾಡಿದ ಜಗನ್‌ ರೆಡ್ಡಿ

ನಾನು ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಪೂಜಿಸುವ ಹಿಂದೂ ಎಂದು ಪ್ರತಿಪಾದಿಸಿದ ರೆಡ್ಡಿ, ಆಂಧ್ರ ಸಿಎಂ ತಮ್ಮ ಆರೋಪ ನಿಜವೋ ಸುಳ್ಳೋ ದೇವರ ಮುಂದೆ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದಾರೆ. ಆದರೆ ಮೇಲ್ನೋಟಕ್ಕೆ ಲಡ್ಡುಗೆ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಇರುವುದು ಪ್ರಯೋಗಾಲಯದ ವರದಿಯಿಂದ ಸ್ಪಷ್ಟವಾಗಿದೆ.