Friday, 22nd November 2024

Tirupati Laddu Row: ಒಡಿಶಾದ ಪುರಿ ಜಗನ್ನಾಥ ದೇವಸ್ಥಾನದಲ್ಲಿ ಬಳಸುವ ತುಪ್ಪದ ಗುಣಮಟ್ಟ ಪರಿಶೀಲನೆಗೆ ಆದೇಶ

Tirupati Laddu Row

ಭವನೇಶ್ವರ: ಆಂಧ್ರಪ್ರದೇಶದ ತಿರುಪತಿ ದೇಗುಲದ ಲಡ್ಡುಗಳನ್ನು ತಯಾರಿಸುವಾಗ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಕಲಬೆರಕೆ (Tirupati Laddu Row) ಮಾಡಲಾಗಿದೆ ಎನ್ನುವ ವಿಚಾರ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಈ ಹಿನ್ನಲೆಯಲ್ಲಿ ಒಡಿಶಾದ ಪುರಿ ಜಗನ್ನಾಥ ದೇವಸ್ಥಾನ (Puri Jagannath Temple)ದಲ್ಲಿ ಬಳಸುವ ತುಪ್ಪದ ಗುಣಮಟ್ಟವನ್ನು ಪರೀಕ್ಷಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಬಗ್ಗೆ ಒಡಿಶಾ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.

ಪುರಿಯಲ್ಲಿ ಬಳಸಲಾಗುವ ತುಪ್ಪದ ವಿರುದ್ಧ ಯಾವುದೇ ಆಕ್ಷೇಪ ವ್ಯಕ್ತವಾಗಿಲ್ಲವಾದರೂ ಸರ್ಕಾರ ಪೂರ್ವಭಾವಿಯಾಗಿ ಗುಣಮಟ್ಟವನ್ನು ಪರಿಶೀಲಿಸಲು ನಿರ್ಧರಿಸಿದೆ ಎಂದು ಪುರಿ ಜಿಲ್ಲಾಧಿಕಾರಿ ಸಿದ್ಧಾರ್ಥ್ ಶಂಕರ್ ಸ್ವೈನ್ (Siddharth Shankar Swain) ತಿಳಿಸಿದ್ದಾರೆ. ʼʼದೇವರಿಗೆ ಅರ್ಪಿಸುವ ‘ಕೋಥಾ ಭೋಗ’ ಮತ್ತು ‘ಬರಡಿ ಭೋಗ’ ತಯಾರಿಗೆ ಬಳಸುವ ತುಪ್ಪದ ಗುಣಮಟ್ಟವನ್ನು ಪೂರ್ವಭಾವಿಯಾಗಿ ಪರಿಶೀಲಿಸಲಾಗುತ್ತದೆʼʼ ಎಂದು ಅವರು ಹೇಳಿದ್ದಾರೆ.

ಒಡಿಶಾ ಹಾಲು ಒಕ್ಕೂಟದಿಂದ ಮಾತ್ರ ದೇವಾಲಯಕ್ಕೆ ತುಪ್ಪ ಪೂರೈಕೆಯಾಗುತ್ತದೆ. “ಕಲಬೆರಕೆಯ ಬಗ್ಗೆ ಮೂಡಬಹುದಾದ ಯಾವುದೇ ಅನುಮಾನವನ್ನು ನಿವಾರಿಸಲು ಒಡಿಶಾ ಹಾಲು ಒಕ್ಕೂಟ ಪೂರೈಸುವ ತುಪ್ಪದ ಗುಣಮಟ್ಟವನ್ನು ಪರಿಶೀಲಿಸಲು ನಾವು ನಿರ್ಧರಿಸಿದ್ದೇವೆ” ಎಂದು ಸಿದ್ಧಾರ್ಥ್ ಶಂಕರ್ ವಿವರಿಸಿದ್ದಾರೆ. ಈ ಬಗ್ಗೆ ಪ್ರಸಾದ ತಯಾರಿಸುವ ಜವಾಬ್ದಾರಿ ಹೊತ್ತಿರುವ ದೇವಾಲಯದ ಸಿಬ್ಬಂದಿ ಮತ್ತು ಒಡಿಶಾ ಹಾಲು ಒಕ್ಕೂಟದ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.

ದೇವಾಲಯದ ಪ್ರತಿನಿಧಿ ಜಗನ್ನಾಥ್ ಸ್ವೈನ್ ಮೊಹಾಪಾತ್ರ ಮಾತನಾಡಿ, ʼʼಕಲಬೆರಕೆಯ ತುಪ್ಪಗಳನ್ನು ಈ ಹಿಂದೆ ದೇವಾಲಯದ ಮೈದಾನದಲ್ಲಿ ದೀಪಗಳನ್ನು ಬೆಳಗಿಸಲು ಬಳಸಲಾಗುತ್ತಿತ್ತು.ಈಗ ಅದನ್ನು ನಿಲ್ಲಿಸಲಾಗಿದೆ. ಭಕ್ತರ ನಂಬಿಕೆಯನ್ನು ಉಳಿಸಿಕೊಳ್ಳಲು ಇಲ್ಲಿ ಬಳಸುವ ತುಪ್ಪವನ್ನು ಕೂಲಂಕಷವಾಗಿ ಪರಿಶೀಲಿಸಲು ನಾವು ಮನವಿ ಸಲ್ಲಿಸಿದ್ದೇವೆ” ಎಂದು ಹೇಳಿದ್ದಾರೆ.

ಕರ್ನಾಟಕದ ಮುಜರಾಯಿ ದೇಗುಲಗಳಲ್ಲಿ ʼನಂದಿನಿ ತುಪ್ಪʼ ಕಡ್ಡಾಯಕ್ಕೆ ಆದೇಶ

ಇತ್ತೀಚೆಗಷ್ಟೇ ರಾಜ್ಯದ ಮುಜರಾಯಿ ಇಲಾಖೆಯ ಎಲ್ಲ ದೇವಸ್ಥಾನಗಳಲ್ಲಿ ಪೂಜೆ, ಪ್ರಸಾದ ತಯಾರಿಸಲು ಕಡ್ಡಾಯವಾಗಿ ನಂದಿನಿ ತುಪ್ಪವನ್ನು ಬಳಸಬೇಕು ಎಂದು ಕರ್ನಾಟಕ ಸರ್ಕಾರ ಆದೇಶ ನೀಡಿದೆ. ಈ ಬಗ್ಗೆ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿ, ರಾಜ್ಯದ ಎಲ್ಲ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಸೇವೆಗಳನ್ನು ನಡೆಸಲು ಮತ್ತು ಪ್ರಸಾದ ತಯಾರಿಸಲು ನಂದಿನಿ ತಪ್ಪವನ್ನಷ್ಟೇ ಬಳಸಬೇಕು ತಿಳಿಸಿದ್ದಾರೆ. ದೇವಸ್ಥಾನಗಳಲ್ಲಿ ದೀಪಗಳು, ಪ್ರಸಾದ ತಯಾರಿಕೆಗೆ ಹಾಗೂ ದಾಸೋಹ ಭವನಗಳಲ್ಲಿ ನಂದಿನಿ ತುಪ್ಪವನ್ನಷ್ಟೇ ಬಳಕೆ ಮಾಡಬೇಕು. ಜತೆಗೆ ಪ್ರಸಾದ ತಯಾರಿಕೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Tirupati Laddu: ತಿರುಪತಿಗೆ ನಂದಿನಿ ತುಪ್ಪ ಸಾಗಿಸುವ ಟ್ಯಾಂಕರ್‌ಗಳಿಗೆ ಜಿಪಿಎಸ್ ಅಳವಡಿಕೆ

ಕೆಎಂಎಫ್‌ ಇತ್ತೀಚಿಗೆ ತಿರುಪತಿ ಲಡ್ಡು ತಯಾರಿಕೆಗೆ ತುಪ್ಪ ಸರಬರಾಜು ಮಾಡುವ ಒಪ್ಪಂದವನ್ನು ಮರು ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ರೈತರ ಹಿತದೃಷ್ಟಿಯಿಂದ ರಾಜ್ಯದಲ್ಲಿ ಎಲ್ಲ ದೇವಸ್ಥಾನಗಳಲ್ಲಿ ನಂದಿನಿ ತುಪ್ಪ ಬಳಕೆ ಮಾಡಲು ತೀರ್ಮಾನಿಸಿದೆ. ಈ ಸಂಬಂಧ ಕೆಎಂಎಫ್ ಅಧ್ಯಕ್ಷ ಭೀಮಾನಾಯ್, ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಸಚಿವ ರಾಮಲಿಂಗಾ ರೆಡ್ಡಿ ನಂದಿನಿ ತುಪ್ಪ ಬಳಕೆಗೆ ಸೂಚನೆ ನೀಡಿದ್ದರ ಹಿನ್ನೆಲೆಯಲ್ಲಿ ಇಲಾಖೆ ಆದೇಶ ಹೊರಡಿಸಿದೆ.