Saturday, 14th December 2024

Tirupati Laddu Row: ತಿರುಪತಿ ಲಡ್ಡು ವಿವಾದ; ತನಿಖೆಯನ್ನು ಸ್ವತಂತ್ರ ಸಂಸ್ಥೆಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್‌ ಚಿಂತನೆ

Tirupati Laddu Row

ನವದೆಹಲಿ: ತಿರುಪತಿ ತಿರುಮಲ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ (Tirupati Laddu Row) ಪ್ರಾಣಿಯ ಕೊಬ್ಬು ಬೆರೆಸಲಾಗಿದೆ ಎನ್ನಲಾದ ಪ್ರಕರಣ ದೇಶಾದ್ಯಂತ ಸಂಚಲ ಸೃಷಿಸಿದೆ. ಜತೆಗೆ ಕೋರ್ಟ್‌ ಮೆಟ್ಟಿಲನ್ನೂ ಏರಿದೆ. ತಿರುಪತಿ ತಿರುಮಲ ದೇವಸ್ಥಾನದ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬಿನೊಂದಿಗೆ ಕಲಬೆರಕೆ ಮಾಡಿದ ತುಪ್ಪವನ್ನು ಬಳಸಲಾಗಿದೆ ಎಂಬ ಆರೋಪಗಳ ತನಿಖೆಯನ್ನು ರಾಜ್ಯದಿಂದ ಸ್ವತಂತ್ರ ಸಂಸ್ಥೆಗೆ ವರ್ಗಾಯಿಸುವ ಬಗ್ಗೆ ಚಿಂತನೆ ನಡೆಸುವುದಾಗಿ ಸುಪ್ರೀಂ ಕೋರ್ಟ್ (Supreme Court) ಸೋಮವಾರ (ಸೆಪ್ಟೆಂಬರ್‌ 30) ಹೇಳಿದೆ.

ತನಿಖೆ ನಡೆಯುತ್ತಿದ್ದರೂ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಹೇಳಿಕೆ ನೀಡಿದ್ದಕ್ಕಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu) ಅವರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

‘ರಾಜಕೀಯದಿಂದ ದೇವರನ್ನು ದೂರವಿಡಿ’

ತಿರುಪತಿ ಲಡ್ಡು ಪ್ರಸಾದ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಆಂಧ್ರಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಕಲಬೆರಕೆ ತುಪ್ಪವನ್ನು ಬಳಸಲಾಗಿದೆ ಎಂಬ ವಿಚಾರ ಸ್ಪಷ್ಟವಾಗಿಲ್ಲದಿದ್ದಾಗ ಮಾಧ್ಯಮಗಳಿಗೆ ಮುಂದೆ ಹೇಳುವ ಅಗತ್ಯವೇನಿತ್ತು? ಎಂದು ಪ್ರಶ್ನಿಸಿದೆ. “ಕನಿಷ್ಠ ಪಕ್ಷ ದೇವರನ್ನು ರಾಜಕೀಯದಿಂದ ದೂರವಿಡಬೇಕು” ಎಂದು ನ್ಯಾಯಾಲಯ ಹೇಳಿದೆ.

ಪರೀಕ್ಷೆಗೆ ಒಳಪಡಿಸಲಾದ ತುಪ್ಪವು ತಿರಸ್ಕರಿಸಿದ ಮಾದರಿ ಎಂದು ಲ್ಯಾಬ್ ವರದಿಗಳು ಸೂಚಿಸುತ್ತವೆ. ಇದನ್ನು ಈಗಾಗಲೇ ಎಸ್ಐಟಿ ತನಿಖೆಗೆ ಆದೇಶಿಸಲಾಗಿದೆ ಎಂದು ನ್ಯಾಯಾಲಯ ಆಂಧ್ರಸರ್ಕಾರದ ವಕೀಲರಿಗೆ ತಿಳಿಸಿದೆ. ಮಾನದಂಡಗಳಿಗೆ ಅನುಗುಣವಾಗಿಲ್ಲದ ತುಪ್ಪವನ್ನು ಲಡ್ಡು ತಯಾರಿಸಲು ಬಳಸಲಾಗುತ್ತದೆಯೇ ? ಎಂದು ನ್ಯಾಯಮೂರ್ತಿ ಬಿ.ಆರ್.ಗವಾಯಿ, ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಅವರನ್ನು ಕೇಳಿದೆ.

ಪುರಾವೆ ಕೇಳಿದ ಕೋರ್ಟ್‌

ಇದು ತನಿಖೆಯಲ್ಲಿದೆ ಎಂದು ಲೂತ್ರಾ ಹೇಳಿದರು. “ಹಾಗಾದರೆ ತಕ್ಷಣ ಮಾಧ್ಯಮದ ಮುಂದೆ ಹೇಳುವ ಅಗತ್ಯವೇನಿತ್ತು? ನೀವು ಧಾರ್ಮಿಕ ಭಾವನೆಗಳನ್ನು ಗೌರವಿಸಬೇಕು” ಎಂದು ನ್ಯಾಯಮೂರ್ತಿ ಗವಾಯಿ ಹೇಳಿದರು. ಪ್ರಸಾದ ತಯಾರಿಸಲು ಕಲುಷಿತ ತುಪ್ಪವನ್ನು ಬಳಸಲಾಗಿದೆ ಎಂಬುದಕ್ಕೆ ಸುಪ್ರೀಂ ಕೋರ್ಟ್ ಪುರಾವೆಗಳನ್ನು ಕೇಳಿದೆ.

ದೇಶಾದ್ಯಂತ ಸಂಚಲನ

ಈ ತಿಂಗಳ ಆರಂಭದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತಿರುಪತಿಯ ಪವಿತ್ರ ಪ್ರಸಾದವನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿತ್ತು ಎಂದು ಹೇಳಿದ್ದರು. ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಆಡಳಿತದಲ್ಲಿ ತಿರುಪತಿ ದೇವಸ್ಥಾನದಲ್ಲಿ ಲಡ್ಡುಗಳನ್ನು ತಯಾರಿಸಲು ಕಲಬೆರಕೆ ತುಪ್ಪವನ್ನು ಬಳಸಲಾಗುತ್ತಿತ್ತು ಎಂದು ಅವರು ಆರೋಪಿಸಿದ್ದರು. ಈ ಬಗ್ಗೆ ತನಿಖೆ ನಡೆಸಲು ಆಂಧ್ರ ಸರ್ಕಾರ ಈಗಾಗಲೇ ವಿಶೇಷ ತನಿಖಾ ತಂಡ (Special Investigation Team)ವನ್ನು ರಚಿಸಿದೆ. ಇತ್ತ ಜಗನ್ ಮೋಹನ್ ರೆಡ್ಡಿ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ತಿರುಪತಿ ಲಡ್ಡು ಪ್ರಸಾದದ ಬಗ್ಗೆ ಸಿಎಂ ನಾಯ್ಡು ಸುಳ್ಳು ಹೇಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಸದ್ಯ ಈ ವಿಚಾರ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ.

ಈ ಸುದ್ದಿಯನ್ನೂ ಓದಿ: Tirupati Laddu Row: ಜಗನ್ ತಿರುಪತಿ ಭೇಟಿ ರದ್ದು; ಮಾನವೀಯತೆಯೇ ನನ್ನ ಧರ್ಮ ಎಂದು ಟಿಡಿಪಿ ಟಾಂಗ್‌