Friday, 27th September 2024

Tirupati Laddu Row: ತಿರುಪತಿ ಲಡ್ಡು ಕಲಬೆರಕೆ ಕೇಸ್‌; 9 ಜನರ SIT ರಚಿಸಿದ ಆಂಧ್ರ ಸರ್ಕಾರ

Tirupati laddu raw

ಹೈದರಾಬಾದ್‌: ತಿರುಪತಿ ದೇಗುಲದ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಕಲಬೆರಕೆ (Tirupati Laddu Row) ಪ್ರಕರಣದ ತನಿಖೆಗಾಗಿ ಆಂಧ್ರಪ್ರದೇಶ ಸರ್ಕಾರ ಒಂಬತ್ತು ಜನರ ಎಸ್‌ಐಟಿ ತಂಡ(SIT) ವನ್ನು ರಚಿಸಿದೆ.‌ ಗುಂಟೂರು ವಲಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಜನರಲ್‌ ಸರ್ವಶ್ರೇಷ್ಠ ತ್ರಿಪಾಠಿ ಅವರ ನೇತೃತ್ವದಲ್ಲಿ ಈ ಎಸ್‌ಐಟಿ ತಂಡವನ್ನು ರಚಿಸಲಾಗಿದೆ.

ಇನ್ನು ಈ ತನಿಖಾ ತಂಡದಲ್ಲಿ ವಿಶಾಖಪಟ್ಟಣ ರೇಂಜ್ ಡಿಐಜಿ ಗೋಪಿನಾಥ್ ಜತ್ತಿ, ಕಡಪಾ ಎಸ್ಪಿ ವಿ ಹರ್ಷವರ್ಧನ್ ರಾಜು, ತಿರುಪತಿ ಹೆಚ್ಚುವರಿ ಎಸ್ಪಿ ವೆಂಕಟ್ ರಾವ್, ಡಿಎಸ್ಪಿಗಳಾದ ಜಿ ಸೀತಾರಾಮ ರಾವ್ ಮತ್ತು ಜೆ ಶಿವನಾರಾಯಣ ಸ್ವಾಮಿ, ಇನ್ಸ್‌ಪೆಕ್ಟರ್‌ಗಳಾದ ಟಿ ಸತ್ಯನಾರಾಯಣ, (ಅನ್ನಮಯ್ಯ), ಕೆ ಉಮಾಮಹೇಶ್ವರ್ (ಎನ್‌ಟಿಆರ್) ಮತ್ತು ಎಂ ಸೂರ್ಯನಾರಾಯಣ (ಚಿತ್ತೂರು) ಇರಲಿದ್ದಾರೆ.

ಹಿಂದಿನ ಸರ್ಕಾರದ ಅವಧಿಯಲ್ಲಿ ಜಗನ್ ಮೋಹನ್ ರೆಡ್ಡಿ ಅವರು ತಿರುಪತಿ ಲಡ್ಡೂ ತಯಾರಿಕೆಯಲ್ಲಿ ಕಲಬೆರಕೆ ತುಪ್ಪವನ್ನು ಬಳಸಿದ್ದಾರೆ ಎಂಬ ಆರೋಪದ ಕುರಿತು ತಿರುಪತಿ ಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಆಧಾರದ ಮೇಲೆ ವಿಸ್ತೃತ ತನಿಖೆ ನಡೆಸುವ ಜವಾಬ್ದಾರಿಯನ್ನು ಈ ತನಿಖಾ ಸಮಿತಿಗೆ ನೀಡಲಾಗಿದೆ. ಎಸ್‌ಐಟಿಯು ತನಿಖೆಯ ಸಂದರ್ಭದಲ್ಲಿ ಸರ್ಕಾರದ ಯಾವುದೇ ಇಲಾಖೆಯಿಂದ ಸೂಕ್ತ ಮಾಹಿತಿ ಮತ್ತು ಸಹಾಯಕ್ಕಾಗಿ ಕರೆ ಮಾಡಬಹುದು. ಎಲ್ಲಾ ಸರ್ಕಾರಿ ಇಲಾಖೆಗಳು SIT ಯೊಂದಿಗೆ ತನ್ನ ಕರ್ತವ್ಯಗಳ ನಿರ್ವಹಣೆಯಲ್ಲಿ ಸಹಕರಿಸಬೇಕು ಮತ್ತು ಯಾವುದೇ ಮಾಹಿತಿ ಅಥವಾ ತಾಂತ್ರಿಕ ಸಹಾಯ ನೀಡಬೇಕು ಎಂದು ಹೇಳಿದ್ದಾರೆ.

ಏನಿದು ವಿವಾದ?

ಕೋಟ್ಯಂತರ ಭಕ್ತರು ಭೇಟಿ ನೀಡುವ ತಿರುಪತಿ ತಿರುಮಲ ದೇವಸ್ಥಾನದಲ್ಲಿ ನೀಡಲಾಗುವ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು (Beef Fat) ಮತ್ತು ಮೀನಿನ ಎಣ್ಣೆ (Fish Fat) ಬೆರೆಸಲಾಗಿದೆ ಎಂಬ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಆರೋಪ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಈ ಪ್ರಕರಣದ ತನಿಖೆಯನ್ನು ಆಂಧ್ರ ಸರ್ಕಾರ ಎಸ್‌ಐಟಿಗೆ ಒಪ್ಪಿಸಿದೆ. ಮತ್ತೊಂದೆಡೆ ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್‌ 11ದಿನಗಳ ಪ್ರಾಯಶ್ಚಿತ ಕಾರ್ಯವನ್ನು ಕೈಗೆತಿತಕೊಂಡಿದ್ದಾರೆ.

ವೈಎಸ್‌ಆರ್‌ಪಿ ಅಧಿಕಾರದಲ್ಲಿದ್ದಾಗ ತಿರುಪತಿ ಲಡ್ಡುಗಳನ್ನು ತಯಾರಿಸಲು ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಕಂಡುಬಂದಿದೆ ಎಂದು ಗುಜರಾತ್‌ನ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ಪ್ರಯೋಗಾಲಯದಿಂದ ಬುಧವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ. ತುಪ್ಪದಲ್ಲಿ ಮೀನಿನ ಎಣ್ಣೆ, ದನದ ಮಾಂಸ ಟಾಲೋ ಮತ್ತು ಹಂದಿಮಾಂಸದ ಕುರುಹುಗಳಿವೆ ಎಂದು ವರದಿ ಸೂಚಿಸಿದೆ.

ಕರ್ನಾಟಕ ಹಾಲು ಒಕ್ಕೂಟ (KMF) ಈ ವಿವಾದಕ್ಕೆ ಸಂಬಂಧಪಟ್ಟಂತೆ ಗುರುವಾರ ಸ್ಪಷ್ಟನೆ ನೀಡಿದೆ. ಈ ಬಗ್ಗೆ ಹೇಳಿಕೆ ಪ್ರಕಟಿಸಿರುವ ಕೆಎಂಎಫ್, ‘ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಮಂಡಳಿಯು ಕಳೆದ ನಾಲ್ಕು ವರ್ಷಗಳಿಂದ ತಮ್ಮಿಂದ (ಕೆಎಂಎಫ್‌) ತುಪ್ಪವನ್ನು ಖರೀದಿಸಿಲ್ಲ’ ಎಂದು ಸ್ಪಷ್ಟನೆ ನೀಡಿದೆ. ಚಂದ್ರಬಾಬು ನಾಯ್ಡು ಆರೋಪಕ್ಕೆ ಸಂಬಂಧಿಸಿದಂತೆ ವರದಿಯನ್ನು ಟಿಡಿಪಿ (TDP) ಬಹಿರಂಗಪಡಿಸಿದೆ.

ಈ ಸುದ್ದಿಯನ್ನೂ ಓದಿ: Nandini Ghee: ತಿರುಪತಿ ಲಡ್ಡು ವಿವಾದ ಬಳಿಕ ಮತ್ತಷ್ಟು ಹೆಚ್ಚಿದೆ ʼನಂದಿನಿʼ ಬ್ರಾಂಡ್‌ ಇಮೇಜ್‌!