ನವದೆಹಲಿ: ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಹಿಂದಿನ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡು(Tirupati Laddu row) ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್(Supreme Court) ಶುಕ್ರವಾರ ವಜಾಗೊಳಿಸಿದೆ.
ಸಾಮಾಜಿಕ ಕಾರ್ಯಕರ್ತ ಮತ್ತು ‘ಗ್ಲೋಬಲ್ ಪೀಸ್ ಇನಿಶಿಯೇಟಿವ್’ ಸಂಘಟನೆಯ ಅಧ್ಯಕ್ಷ ಕೆ.ಎ.ಪಾಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯಪೀಠ ವಜಾಗೊಳಿಸಿದೆ. “ನಿಮ್ಮ ಮನವಿ ಪ್ರಕಾರ, ನಾವು ಎಲ್ಲಾ ದೇವಾಲಯಗಳು, ಗುರುದ್ವಾರಗಳು ಇತ್ಯಾದಿಗಳನ್ನು ಪ್ರತ್ಯೇಕ ರಾಜ್ಯಗಳನ್ನು ರಚಿಸಲು ಸಾಧ್ಯವಿಲ್ಲ. ನಿರ್ದಿಷ್ಟ ಧರ್ಮಕ್ಕೆ ಪ್ರತ್ಯೇಕ ರಾಜ್ಯ ರಚಿಸಬೇಕೆಂದು ನಾವು ನಿರ್ದೇಶಿಸಲು ಸಾಧ್ಯವಿಲ್ಲ. ವಜಾಗೊಳಿಸಲಾಗಿದೆ” ಎಂದು ನ್ಯಾಯಪೀಠ ಹೇಳಿದೆ.
ಲಡ್ಡು ಪ್ರಸಾದಕ್ಕೆ ಬೇಕಾದ ಮೂಲ ವಸ್ತುಗಳ ಖರೀದಿ ಮತ್ತು ತಯಾರಿಕೆಯಲ್ಲಿ ಭ್ರಷ್ಟಾಚಾರ ಮತ್ತು ದುರಾಡಳಿತದ ಆರೋಪಗಳ ಬಗ್ಗೆ ಕೇಂದ್ರ ತನಿಖಾ ದಳ (ಸಿಬಿಐ) ಸಮಗ್ರ ತನಿಖೆ ನಡೆಸಬೇಕೆಂದು ಪಾಲ್ ತಮ್ಮ ಅರ್ಜಿಯಲ್ಲಿ ಕೋರಿದ್ದರು.
ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆಯಾಗಿದೆ. ಅವರಿಗೆ ಪರಿಹಾರ ಹೇಳಲು ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಅಕ್ಟೋಬರ್ 4 ರಂದು ಐದು ಸದಸ್ಯರ ಸ್ವತಂತ್ರ ಎಸ್ಐಟಿ ರಚಿಸಿ ಆದೇಶಿಸಿತ್ತು. ಸ್ವತಂತ್ರ ಎಸ್ಐಟಿಯಲ್ಲಿ ಸಿಬಿಐ ಮತ್ತು ಆಂಧ್ರಪ್ರದೇಶ ಪೊಲೀಸರ ತಲಾ ಇಬ್ಬರು ಅಧಿಕಾರಿಗಳು ಮತ್ತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್ಎಸ್ಎಸ್ಎಐ) ಹಿರಿಯ ಅಧಿಕಾರಿ ಇದ್ದಾರೆ.
ಕಲಬೆರಕೆ ತುಪ್ಪ ಸೇರಿದಂತೆ ತಿರುಪತಿಯ ಪವಿತ್ರ ‘ಲಡ್ಡು ಪ್ರಸಾದ’ ತಯಾರಿಕೆಯಲ್ಲಿ ಕಳಪೆ ಗುಣಮಟ್ಟದ ಪದಾರ್ಥಗಳನ್ನು ಬಳಸಲಾಗಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಆರೋಪ ಮಾಡಿದ್ದರು. ಈ ಪ್ರಸಂಗ ಭಕ್ತರಲ್ಲಿ ಗಂಭೀರ ಕಳವಳಗಳನ್ನು ಹುಟ್ಟುಹಾಕಿವೆ ಮತ್ತು ಈ ಪವಿತ್ರ ಪ್ರಸಾದದ ಪಾವಿತ್ರ್ಯಕ್ಕೆ ಕಳಂಕ ತಂದಿವೆ ಎಂದು ಪಾಲ್ ತಮ್ಮ ಪಿಐಎಲ್‌ನಲ್ಲಿ ತಿಳಿಸಿದ್ದರು.
ಧರ್ಮವನ್ನು ಆಚರಿಸುವ ಮತ್ತು ಪ್ರಚಾರ ಮಾಡುವ ಸ್ವಾತಂತ್ರ್ಯವನ್ನು ಖಾತರಿಪಡಿಸುವ ಸಂವಿಧಾನದ 25 ನೇ ವಿಧಿಯನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದ್ದು,. ಹೆಚ್ಚುತ್ತಿರುವ ಕೋಮು ಉದ್ವಿಗ್ನತೆ ಮತ್ತು ಮೂಲಭೂತ ಧಾರ್ಮಿಕ ಹಕ್ಕುಗಳ ಉಲ್ಲಂಘನೆಯನ್ನು ಕೋರ್ಟ್‌ಗೆ ಮನವರಿಕೆ ಮನವರಿಕೆ ಮಾಡಲು ಯತ್ನಿಸಲಾಗಿತ್ತು.
“ತಿರುಮಲ ತಿರುಪತಿ ದೇವಸ್ಥಾನಂ ವಿಶ್ವದಾದ್ಯಂತದ ಹಿಂದೂಗಳ ಅತಿದೊಡ್ಡ ಶ್ರದ್ಧಾ ಕೇಂದ್ರಗಳಲ್ಲಿ ಒಂದಾಗಿದೆ. ಲಡ್ಡು ಪ್ರಸಾದವು ಹಿಂದೂಗಳಿಗೆ ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿ ಮಹತ್ವದ್ದು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ .
“ಲಡ್ಡು ಪ್ರಸಾದದ ಪಾವಿತ್ರ್ಯಕ್ಕೆ ಧಕ್ಕೆ ಮಾಡುವುದು ಲಕ್ಷಾಂತರ ಭಕ್ತರ ಮೇಲೆ ಪರಿಣಾಮ ಬೀರುತ್ತದೆ. ಈ ಧಾರ್ಮಿಕ ಕ್ಷೇತ್ರದ ಖ್ಯಾತಿಯನ್ನು ಹಾಳುಮಾಡುತ್ತದೆ. ಭಕ್ತರ ಹಿತದೃಷ್ಟಿಯಿಂದ ಮತ್ತು ರಾಜಕೀಯ ಕುತಂತ್ರ ಮತ್ತು ಭ್ರಷ್ಟಾಚಾರವು ನಮ್ಮ ಪವಿತ್ರ ಸಂಪ್ರದಾಯಗಳನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂಬುನ್ನು ಖಾತರಿಪಡಿಸಲು ನಾನು ಈ ಅರ್ಜಿ ಸಲ್ಲಿಸಿದ್ದೇನೆ” ಎಂದು ಪಾಲ್ ಕೋರ್ಟ್ ಮುಂದೆ ಹೇಳಿದ್ದರು.
ಏನಿದು ವಿವಾದ?
ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತಿರುಪತಿಯ ಪವಿತ್ರ ಪ್ರಸಾದವನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿತ್ತು ಎಂದು ಹೇಳಿದ್ದರು. ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಆಡಳಿತದಲ್ಲಿ ತಿರುಪತಿ ದೇವಸ್ಥಾನದಲ್ಲಿ ಲಡ್ಡುಗಳನ್ನು ತಯಾರಿಸಲು ಕಲಬೆರಕೆ ತುಪ್ಪವನ್ನು ಬಳಸಲಾಗುತ್ತಿತ್ತು ಎಂದು ಅವರು ಆರೋಪಿಸಿದ್ದರು. ಈ ಬಗ್ಗೆ ತನಿಖೆ ನಡೆಸಲು ಆಂಧ್ರ ಸರ್ಕಾರ ಈಗಾಗಲೇ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಇತ್ತ ಜಗನ್ ಮೋಹನ್ ರೆಡ್ಡಿ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ತಿರುಪತಿ ಲಡ್ಡು ಪ್ರಸಾದದ ಬಗ್ಗೆ ಸಿಎಂ ನಾಯ್ಡು ಸುಳ್ಳು ಹೇಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಸದ್ಯ ಈ ವಿಚಾರ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ.
ಈ ಸುದ್ದಿಯನ್ನೂ ಓದಿ: Bomb Threat: ತಿರುಪತಿ ಹೊಟೇಲ್‌ಗಳಿಗೆ ಬಾಂಬ್ ಬೆದರಿಕೆ; ಉದಯನಿಧಿ ಸ್ಟ್ಯಾಲಿನ್ ಪತ್ನಿ ಕೈವಾಡ ಇದೆ ಎಂದು ಇ-ಮೇಲ್ ಸಂದೇಶ