Saturday, 21st September 2024

Tirupati Laddu Row: ತಿರುಪತಿ ಲಡ್ಡು ವಿವಾದ; ಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕರಿಂದ ಶಾಕಿಂಗ್‌ ಮಾಹಿತಿ ಬಹಿರಂಗ

Tirupati Laddu Row

ಲಕ್ನೋ: ವಿಶ್ವವಿಖ್ಯಾತ ತಿರುಪತಿ ದೇವಸ್ಥಾನದ ಲಡ್ಡುಗಳಲ್ಲಿ (Tirupati Laddoo) ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ವಿಚಾರ ಸದ್ಯ ದೇಶಾದ್ಯಂತ ಸಂಚಲನ ಮೂಡಿಸಿದೆ (Tirupati laddu Row). ಈ ಮಧ್ಯೆ ಅಯೋಧ್ಯೆ ರಾಮ ಮಂದಿರ (Ayodhya Ram Mandir)ದ ಪ್ರಧಾನ ಅರ್ಚಕರಾದ ಆಚಾರ್ಯ ಸತ್ಯೇಂದ್ರ ದಾಸ್‌ (Acharya Satyendra Das) ಮಾತನಾಡಿ, ಈ ವರ್ಷದ ಜನವರಿಯಲ್ಲಿ ನಡೆದ ಬಾಲಕ ರಾಮನ ಪ್ರಾಣ ಪ್ರತಿಷ್ಠೆ ಸಮಾರಂಭದಲ್ಲಿ ತಿರುಪತಿ ದೇವಸ್ಥಾನದಲ್ಲಿ ತಯಾರಾದ ಪ್ರಸಾದವನ್ನು ವಿತರಿಸಲಾಗಿತ್ತು ಎಂದು ತಿಳಿಸಿದ್ದಾರೆ.

ರಾಮ ಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ತಿರುಪತಿ ದೇವಸ್ಥಾನದಿಂದ ಪೂರೈಕೆಯಾದ 300 ಕೆಜಿ ಪ್ರಸಾದವನ್ನು ಭಕ್ತರಿಗೆ ವಿತರಿಸಲಾಗಿತ್ತು ಎಂದು ಅವರು ದೃಢಪಡಿಸಿದ್ದಾರೆ. ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ತಿರುಪತಿ ದೇವಸ್ಥಾನದ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಇತ್ತೀಚೆಗೆ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಆರೋಪಿಸಿದ್ದು, ವ್ಯಾಪಕ ಚರ್ಚೆ ಹುಟ್ಟು ಹಾಕಿದೆ.

ಆಚಾರ್ಯ ಸತ್ಯೇಂದ್ರ ದಾಸ್‌ ಹೇಳಿದ್ದೇನು?

ವಿವಾದದ ಬಗ್ಗೆ ಮಾತನಾಡಿದ ಆಚಾರ್ಯ ಸತ್ಯೇಂದ್ರ ದಾಸ್‌ ಅವರು, ʼʼಒಂದುವೇಳೆ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಸಿದ್ದರೆ ಅದು ಅಕ್ಷಮ್ಯ ಅಪರಾಧ. ಇದರಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕುʼʼ ಎಂದು ಆಗ್ರಹಿಸಿದ್ದಾರೆ. ಈ ವಿಚಾರದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಬೇಕು ಎಂದೂ ಅವರು ಹೇಳಿದ್ದಾರೆ.

ʼʼವೈಷ್ಣವ ಸಂತರು ಹಾಗೂ ಭಕ್ತರು ಈಗಲೂ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸೇವಿಸುವುದಿಲ್ಲ. ಹೀಗಿರುವಾಗ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಸಿದ್ದರೆ ಅದು ಘೋರ ಅಪರಾಧವಾಗುತ್ತದೆ. ಇದು ಹಿಂದೂಗಳ ನಂಬಿಕೆ ಮೇಲೆ ಎಸಗುವ ಬಹುದೊಡ್ಡ ದ್ರೋಹʼʼ ಎಂದು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ʼʼಹೀಗಾಗಿ ಈ ಆರೋಪದ ವಿರುದ್ಧ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಠಿನ ಕ್ರಮ ಕೈಗೊಳ್ಳಬೇಕುʼʼ ಎಂದಿದ್ದಾರೆ.

2019 ಮತ್ತು 2024 ಕಾಲಾವಧಿಯಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ ಅವರು ಪ್ರತಿ ಬಾರಿ ದಿಲ್ಲಿಗೆ ಭೇಟಿ ನೀಡಿದ್ದಾಗಲೂ ತಿರುಪತಿ ದೇಗುಲದ ಲಡ್ಡು ಪ್ರಸಾದವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ನೀಡಿದ್ದರು.

ಏನಿದು ವಿವಾದ?

ತಿರುಪತಿ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಹಿಂದಿನ ವೈಎಸ್‌ಆರ್ ಕಾಂಗ್ರೆಸ್ ಸರ್ಕಾರ ಬಳಸುತ್ತಿತ್ತು ಎಂದು ಸೆಪ್ಟೆಂಬರ್‌ 18ರಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪಿಸಿದ್ದರು. ತಿರುಪತಿಯಲ್ಲಿ ಪ್ರಸಾದವಾಗಿ ರೂಪದಲ್ಲಿ ನೀಡಲಾಗುವ ಲಡ್ಡುಗಳನ್ನು ತಯಾರಿಸಲು ದನದ ಕೊಬ್ಬು, ಮೀನಿನ ಎಣ್ಣೆ ಹಾಗೂ ತಾಳೆ ಎಣ್ಣೆ ಬಳಸಿರುವುದು ಲ್ಯಾಬ್‌ನಲ್ಲಿಯೂ ದೃಢವಾಗಿತ್ತು. ತುಪ್ಪದಲ್ಲಿ ಮೀನಿನ ಎಣ್ಣೆ, ದನದ ಮಾಂಸ ಟಾಲೋ ಮತ್ತು ಹಂದಿಮಾಂಸದ ಕುರುಹುಗಳಿವೆ ಎಂದು ಗುಜರಾತ್‌ನ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ಪ್ರಯೋಗಾಲಯದ ವರದಿ ಸೂಚಿಸಿತ್ತು. ಈ ಆರೋಪವನ್ನು ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ ನಿರಾಕರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Tirupati Laddoo: ತಿರುಪತಿ ಲಡ್ಡುವಿಗಿದೆ 300 ವರ್ಷಗಳ ಇತಿಹಾಸ! ಇದರಲ್ಲಿ ಬಳಸುವ ಪದಾರ್ಥಗಳು ಏನೇನು?