Wednesday, 25th September 2024

Tirupati Laddu Row: ತಿರುಪತಿ ಲಡ್ಡು ವಿವಾದ; ತಮಿಳುನಾಡು ಡೈರಿ ಸಂಸ್ಥೆ ವಿರುದ್ಧ TTD ದೂರು

Tirupati Laddoo

ಹೈದರಾಬಾದ್‌: ತಿರುಪತಿ ದೇಗುಲದ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಕಲಬೆರಕೆ (Tirupati Laddu Row) ವಿವಾದಕ್ಕೆ ಸಂಬಂಧಿಸಿದಂತೆ ತಿರುಮಲ ತಿರುಪತಿ ದೇವಸ್ಥಾನಮ್ (TTD) ಪೊಲೀಸ್‌ ದೂರು ದಾಖಲಿಸಿದೆ. ಜುಲೈನಲ್ಲಿ ದೇವಸ್ಥಾನಕ್ಕೆ ಕಲಬೆರಕೆ ತುಪ್ಪವನ್ನು ಸರಬರಾಜು ಮಾಡಿದ ಆರೋಪದ ಮೇಲೆ ತಮಿಳುನಾಡು ಮೂಲದ ಡೈರಿ ಸಂಸ್ಥೆ ಎಆರ್ ಡೈರಿ ಫುಡ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಬುಧವಾರ ಔಪಚಾರಿಕ ಪೊಲೀಸ್ ದೂರು ದಾಖಲಿಸಿದೆ.

ಈ ಬಗ್ಗೆ ಅಧಿಕೃತ ಮೂಲಗಳು ನೀಡಿದ್ದು, ಲಡ್ಡು ಪ್ರಸಾದ ತಯಾರಿಕೆಯಲ್ಲಿ ಬಳಸುವ ತುಪ್ಪದ ಕಲಬೆರಕೆ ಆರೋಪದ ಬಗ್ಗೆ ತನಿಖೆ ನಡೆಸಲು ಸರ್ಕಾರವು ಪೊಲೀಸ್ ಮಹಾನಿರೀಕ್ಷಕ ಸರ್ವಶ್ರೇಷ್ಠ ತ್ರಿಪಾಠಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ ನಂತರ ತಿರುಪತಿ ಪಟ್ಟಣ ಪೊಲೀಸರಿಗೆ ದೂರು ನೀಡಲಾಗಿದೆ.

ಲಡ್ಡು ಪ್ರಸಾದ ತಯಾರಿಸಲು ದೇವಸ್ಥಾನಕ್ಕೆ 10 ಲಕ್ಷ ಕೆ.ಜಿ ತುಪ್ಪ ಪೂರೈಕೆಗಾಗಿ ಮೇ 15 ರಂದು ಎಆರ್ ಡೈರಿ ಫುಡ್ಸ್‌ಗೆ ದೇವಸ್ಥಾನದ ಆಡಳಿತ ಮಂಡಳಿ ಆರ್ಡರ್ ಮಾಡಿದೆ ಎಂದು ಟಿಟಿಡಿ ಪ್ರಧಾನ ವ್ಯವಸ್ಥಾಪಕ (ಪ್ರೊಕ್ಯೂರ್‌ಮೆಂಟ್) ಪಿ ಮುರಳಿಕೃಷ್ಣ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಸಂಸ್ಥೆಯು ಜೂನ್ 12, 20 ಮತ್ತು 25 ಮತ್ತು ಜುಲೈ 6 ರಂದು ನಾಲ್ಕು ಟ್ಯಾಂಕರ್ ತುಪ್ಪವನ್ನು ಪೂರೈಕೆ ಮಾಡಿದೆ.

“ಟಿಟಿಡಿಯು ಈ ತುಪ್ಪದ ಗುಣಮಟ್ಟ ಪರೀಕ್ಷೆಯನ್ನು ಹಳೆಯ ವಿಧಾನಗಳನ್ನು ಬಳಸಿ ಮಾಡಿದ ನಂತರ ಪ್ರಸಾದವನ್ನು ತಯಾರಿಸಲು ಈ ತುಪ್ಪವನ್ನು ಬಳಸಿತು. ಆದರೆ ಅದು ಕಲಬೆರಕೆ ಪರೀಕ್ಷೆಗೆ ಹೋಗಲಿಲ್ಲ. ಲಡ್ಡುವಿನ ಗುಣಮಟ್ಟದ ಕೊರತೆಯ ಬಗ್ಗೆ ಯಾತ್ರಾರ್ಥಿಗಳಿಂದ ವಿವಿಧ ದೂರುಗಳನ್ನು ಗಮನದಲ್ಲಿಟ್ಟುಕೊಂಡು, ಕಲಬೆರಕೆ ಪರೀಕ್ಷೆಯನ್ನು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯಲ್ಲಿ (ಎನ್‌ಡಿಡಿಬಿ) ಮಾಡಲು ಟಿಟಿಡಿ ನಿರ್ಧರಿಸಿತ್ತು ಎಂದು ಮುರಳಿಕೃಷ್ಣ ಹೇಳಿದರು.

ಅದರಂತೆ, ಟಿಟಿಡಿ ಜುಲೈ 6 ಮತ್ತು ಜೂನ್ 12 ರಂದು ಎಪಿ ಡೈರಿ ಫುಡ್ಸ್ ಸರಬರಾಜು ಮಾಡಿದ ನಾಲ್ಕು ಟ್ಯಾಂಕರ್‌ಗಳಿಂದ ತುಪ್ಪದ ಮಾದರಿಗಳನ್ನು ಸಂಗ್ರಹಿಸಿ ಕಲಬೆರಕೆ ಪರೀಕ್ಷೆಗಾಗಿ ಎನ್‌ಡಿಡಿಬಿ ಲ್ಯಾಬ್‌ಗಳಿಗೆ ಕಳುಹಿಸಿದೆ. ಈ ವೇಳೆ ತುಪ್ಪ ಕಲಬೆರಕೆ ಆಗಿರುವುದು ದೃಢವಾಗಿದೆ. ಈ ಬಗ್ಗೆ ಜುಲೈ 22, 23 ಮತ್ತು 27 ರಂದು ವಿವರಣೆ ಕೋರಿ ಕಂಪನಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಮುರಳಿಕೃಷ್ಣ ಹೇಳಿದರು. ಕಂಪನಿಯು ಸೆಪ್ಟೆಂಬರ್ 4 ರಂದು ಪ್ರತಿಕ್ರಿಯಿಸಿ, ಕಲಬೆರಕೆ ಆರೋಪವನ್ನು ನಿರಾಕರಿಸಿತು. ನಂತರ ಟಿಟಿಡಿ ತನಿಖೆಗೆ ಆದೇಶಿಸಿದೆ ಎಂದರು.

ಏತನ್ಮಧ್ಯೆ, ಕಲಬೆರಕೆ ತುಪ್ಪದ ಬಗ್ಗೆ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಗುರಿಯಾಗಿರುವ ಮಾಜಿ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷ, ನಾಯ್ಡು ಅವರ ಆರೋಪಗಳು ರಾಜಕೀಯ ಉದ್ದೇಶಗಳಿಂದ ಕೂಡಿದೆ ಮತ್ತು ಭಕ್ತರ ಭಾವನೆಗಳಿಗೆ ತೀವ್ರವಾಗಿ ನೋವುಂಟು ಮಾಡಿದೆ ಎಂದು ಆರೋಪಿಸಿದೆ.

ಈ ಸುದ್ದಿಯನ್ನೂ ಓದಿ: Tirupati Laddu Row: ತಿರುಪತಿ ಲಡ್ಡು ಬಗ್ಗೆ ವಿವಾದಾತ್ಮಕ ಹೇಳಿಕೆ; ಪವನ್‌ ಕಲ್ಯಾಣ್‌ ಆಕ್ರೋಶದ ಬೆನ್ನಲ್ಲೇ ಕ್ಷಮೆಯಾಚಿಸಿದ ನಟ ಕಾರ್ತಿ