Friday, 22nd November 2024

Tirupati: ತಿರುಪತಿಗೆ ಪ್ರತ್ಯೇಕ ರಾಜ್ಯ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್‌!

Supreme Court dismisses PIL seeking separate state for Tirupati after laddu row

ಹೊಸದಿಲ್ಲಿ: ಲಡ್ಡು ವಿವಾದದ ಜೊತೆಗೆ ಧಾರ್ಮಿಕ ಪುಣ್ಯ ಕ್ಷೇತ್ರವಾದ ತಿರುಪತಿಗೆ (Tirupati separate state) ಪ್ರತ್ಯೇಕ ರಾಜ್ಯ/ಕೇಂದ್ರಾಡಳಿತ ಪ್ರದೇಶ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ಶುಕ್ರವಾರ ಡಾ. ಕೆಎ ಪಾಲ್ ಅವರು ಮಂಡಿಸಿದ ವಾದವನ್ನು ಆಲಿಸಿದ ಬಳಿಕ ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರ ಪೀಠವು ಈ ಆದೇಶವನ್ನು ನೀಡಿದೆ.

ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿರುಮಲ ಲಡ್ಡುವಿಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಿಬಿಐನಿಂದ ತನಿಖೆ ನಡೆಸುವಂತೆ ಪ್ರಜಾಶಾಂತಿ ಪಕ್ಷದ ಅಧ್ಯಕ್ಷ ಕೆಎ ಪಾಲ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದರ ಜೊತೆಗೆ ತಿರುಮಲವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವಂತೆಯೂ ಕೇಳಿಕೊಂಡಿದ್ದರು.

ಮೇಲಿನ ಆರೋಪಗಳ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯ ತನಿಖೆ ಮತ್ತು ಸರ್ಕಾರಿ ಸಂಸ್ಥೆಗಳಿಂದ ನಿರ್ವಹಿಸಲ್ಪಡುವ ಹಿಂದೂ ದೇವಾಲಯಗಳಲ್ಲಿ ಹೆಚ್ಚಿನ ಹೊಣೆಗಾರಿಕೆ ಸೇರಿದಂತೆ ಪರಿಹಾರಗಳನ್ನು ಕೋರಿ ಸುಮಾರು ಐದು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಅದರಂತೆ ಅಕ್ಟೋಬರ್ 4 ರಂದು ತಿರುಮಲ ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡುವ ಲಡ್ಡುಗಳನ್ನು ತಯಾರಿಸಲು ಕಲಬೆರಕೆ ತುಪ್ಪವನ್ನು ಬಳಸಲಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಸ್ವತಂತ್ರ ವಿಶೇಷ ತನಿಖಾ ತಂಡ (ಎಸ್‌ಐಟಿ) ಅನ್ನು ರಚಿಸಿತ್ತು.

ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ನಿಮ್ಮ ಕೋರಿಕೆಯಂತೆ ನಡೆದರೆ, ದೇಶದ ಎಲ್ಲಾ ದೇವಾಲಯಗಳು ಮತ್ತು ಗುರುದ್ವಾರಗಳನ್ನು ಪ್ರತ್ಯೇಕ ರಾಜ್ಯಗಳನ್ನಾಗಿ ಮಾಡಬೇಕಾಗುತ್ತದೆ ಎಂದು ಹೇಳಿದೆ. ನಿರ್ದಿಷ್ಟ ಧರ್ಮಕ್ಕೆ ಪ್ರತ್ಯೇಕ ರಾಜ್ಯ ರಚನೆಗೆ ಆದೇಶ ನೀಡಲು ಸಾಧ್ಯವಿಲ್ಲ ಎಂದು ಪೀಠವು ಅರ್ಜಿಯನ್ನು ವಜಾಗೊಳಿಸಿದೆ.

ಸುಪ್ರೀಂ ಕೋರ್ಟ್ ತೀರ್ಪಿಗೆ ಕೆಎ ಪಾಲ್ ಪ್ರತಿಕ್ರಿಯೆ

ತಿರುಮಲವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವಂತೆ ತಾವು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಕೇವಲ ಐದು ನಿಮಿಷಗಳಲ್ಲಿ ವಿಚಾರಣೆ ನಡೆಸಿದೆ. ತಮ್ಮ ಅರ್ಜಿಯ ವಿಚಾರಣೆಗೆ ಕೇವಲ ಐದು ನಿಮಿಷಗಳ ಸಮಯವನ್ನು ಮಾತ್ರ ಸುಪ್ರೀಂ ಕೋರ್ಟ್ ನೀಡಿತ್ತು. ಈ ಕುರಿತು ಮತ್ತೊಮ್ಮೆ ಸುಪ್ರೀಂ ಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸುವುದಾಗಿ ಎಂದು ಡಾ. ಕೆಎ ಪಾಲ್ ತಿಳಿಸಿದ್ದಾರೆ.

ಕೆಎ ಪಾಲ್‌ ಅವರ ವಾದ ಹೇಗಿತ್ತು?

“764 ಕ್ಯಾಥೋಲಿಕ್‌ ಜನರ ಗುಂಪಿಗೆ ಒಂದು ದೇಶವನ್ನು (ವ್ಯಾಟಿಕನ್‌) ರಚಿಸುವುದಾದರೆ, 34 ಲಕ್ಷ ಜನರಿರುವ ತಿರುಪತಿಯನ್ನು ಏಕೆ ಪ್ರತ್ಯೇಕ ರಾಜ್ಯವನ್ನಾಗಹಿ ರಚಿಸಬಾರದು ಎಂದು ಹೇಳುವ ಮೂಲಕ ಕೆಎ ಪಾಲ್‌ ಅವರು ತಮ್ಮ ಮನವಿಯನ್ನು ಸಮರ್ಥಿಸಿಕೊಂಡಿದ್ದಾರೆ. ದೇಶದಲ್ಲಿ ಆಂಧ್ರಪ್ರದೇಶದ ಚಿತ್ರಣವನ್ನು ರಕ್ಷಿಸಲು ಮತ್ತು ಮೂಲಭೂತ ಮಾನವ ಹಕ್ಕುಗಳನ್ನು ರಕ್ಷಿಸಲು ಅರ್ಜಿ ಸಲ್ಲಿಸಿರುವುದಾಗಿ ಅವರು ತಮ್ಮ ವಾದದಲ್ಲಿ ಹೇಳಿದ್ದಾರೆ.

“ನಮ್ಮ ಮನವಿಯನ್ನು ತಾವು ಸ್ವೀಕರಿಸಬೇಕು. 29 ರಾಜ್ಯಗಳಲ್ಲಿ ಹಲವು ಕೇಂದ್ರಾಡಳಿತ ಪ್ರದೇಶಗಳನ್ನು ಈಗಾಗಲೇ ಘೋಷಿಸಲಾಗಿದೆ. ಇನ್ನು 30 ಲಕ್ಷ ಜನರಿರುವ ತಿರುಪತಿಯನ್ನು ಏಕೆ ಮಾಡಬಾರದು? ಎಂದು ಪಾಲ್‌ ಅವರು ಪ್ರಶ್ನೆ ಮಾಡಿದ್ದಾರೆ.

ಈ ಸುದ್ದಿಯನ್ನು ಓದಿ: Tirupati Laddu row: ತಿರುಪತಿ ಲಡ್ಡು ವಿವಾದ; ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಪಿಐಎಲ್‌ ವಜಾಗೊಳಿಸಿದ ಸುಪ್ರೀಂ ಕೋರ್ಟ್‌