Sunday, 15th December 2024

ಚುನಾವಣೆಗೆ ಸಂಬಂಧಿಸಿದ ಬಹಿರಂಗ ಹೇಳಿಕೆಗೆ ಟಿಎಂಸಿಯಿಂದ ಶಿಸ್ತುಕ್ರಮ ಎಚ್ಚರಿಕೆ

ಕೋಲ್ಕತ: ಪಶ್ಚಿಮ ಬಂಗಾಳ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧೆ ಕುರಿತಂತೆ ಪಕ್ಷದ ಹಿರಿಯ ನಾಯಕರು ಮತ್ತು ಯುವ ಮುಂದಾಳುಗಳ ನಡುವೆ ಮಾತಿನ ಚಕಮಕಿ ನಡೆದ ಬೆನ್ನಲ್ಲೇ ಶಿಸ್ತುಕ್ರಮದ ಎಚ್ಚರಿಕೆ ಯನ್ನು ತೃಣಮೂಲ ಕಾಂಗ್ರೆಸ್ ಪಕ್ಷ ನೀಡಿದೆ.

ಪಾಲಿಕೆ ಚುನಾವಣೆಯನ್ನು ರಾಜ್ಯ ಚುನಾವಣಾ ಆಯೋಗ ಜನವರಿ 22ರ ಬದಲಾಗಿ ಫೆಬ್ರುವರಿ 12ರಂದು ನಡೆಸಲು ನಿರ್ಧರಿಸಿದೆ. ದಿನಾಂಕ ಬದಲಾವಣೆಗೊಂಡ ಬಳಿಕ ಟಿಎಂಸಿ ಪಕ್ಷದ ಹಲವು ನಾಯಕರು ಬಹಿರಂಗ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದರು.

ಪಕ್ಷದ ಹಿರಿಯ-ಕಿರಿಯ ನಾಯಕರ ನಡುವಣ ವಾಕ್ಸಮರ ತೃಣಮೂಲ ಕಾಂಗ್ರೆಸ್‌ಗೆ ಮುಜುಗರ ತಂದಿರುವು ದರಿಂದ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ.

ಮುಖ್ಯ ಕಾರ್ಯದರ್ಶಿ ಪಾರ್ಥ ಚಟರ್ಜಿ, ಬಹಿರಂಗವಾಗಿ ಚುನಾವಣೆಗೆ ಸಂಬಂಧಿಸಿದ ಹೇಳಿಕೆ ನೀಡುವುದನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಜತೆಗೆ ಯಾವುದೇ ವಿಚಾರವಿದ್ದರೂ, ಆಂತರಿಕ ಸಮಿತಿ ಜತೆ ಚರ್ಚಿಸಿ ಬಗೆಹರಿಸಿ ಕೊಳ್ಳಿ. ಇದನ್ನು ಪಾಲಿಸದವರ ವಿರುದ್ಧ ಶಿಸ್ತು ಸಮಿತಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

ಸಿಲಿಗುರಿ ಮಹಾನಗರ ಪಾಲಿಕೆ, ಚಾಂದೆರ್‌ನಗೊರ್‌ ಮಹಾನಗರ ಪಾಲಿಕೆ, ಬಿಧಾನ್‌ನಗರ್ ಮಹಾನಗರ ಪಾಲಿಕೆ ಮತ್ತು ಅಸಾನೊಲ್ ಮಹಾನಗರ ಪಾಲಿಕೆಗೆ ಫೆ. 12ರಂದು ಚುನಾವಣೆ ನಡೆಯಲಿದೆ.