ಎರಡನೇ ಮಹಾಯುದ್ಧದಲ್ಲಿ ಮಿತ್ರ ಪಡೆಗಳ ಪರವಾಗಿ ಹೋರಾಡಿದ ಭಾರತೀಯ ಪಡೆಯಲ್ಲಿದ್ದ ಬಲವಂತ್ ಸಿಂಗ್ 1944ರ ಡಿಸೆಂಬರ್ 15ರಂದು ಇಟೆಲಿಯಲ್ಲಿ ಸಂಭವಿಸಿದ ನೆಲಬಾಂಬ್ ಸ್ಫೋಟದಲ್ಲಿ ಎಡಗಾಲನ್ನು ಕಳೆದುಕೊಂಡಿದ್ದರು.
ಎರಡನೇ ಮಹಾಯುದ್ಧದಿಂದ ವಾಪಸ್ಸಾದ ಬಳಿಕ ಅವರು 1972ರಲ್ಲಿ ಸರಕಾರ ಆರಂಭಿಸಿದ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಿದರು. ಸ್ವಾತಂತ್ರ್ಯದ ನಂತರ ನಡೆದ ವಿವಿಧ ಯುದ್ಧಗಳಲ್ಲಿ ಅಂಗವಿಲಕರಾಗಿ ಸೇವೆಯಿಂದ ಮುಕ್ತಿ ಹೊಂದಿದ ಸೈನಿಕರಿಗೆ ಅವರ ಕೊನೆಯ ತಿಂಗಳ ವೇತನದ ಶೇಕಡ 100ರಷ್ಟು ಪಿಂಚಣಿಯನ್ನು ಖಾತರಿಪಡಿಸುವ ಯೋಜನೆ ಇದಾಗಿದೆ.
ಇದೀಗ ಸಶಸ್ತ್ರ ಪಡೆ ನ್ಯಾಯ ಮಂಡಳಿಯ ದಿಲ್ಲಿ ಪೀಠ, 97 ವರ್ಷ ವಯಸ್ಸಿನ ಈ ಸೈನಿಕನ ಪರವಾಗಿ ತೀರ್ಪು ನೀಡಿದೆ. ಸಿಂಗ್ 2008ರಿಂದ ಇರುವ ಬಾಕಿಯ ಜತೆಗೆ ಶೇ.100ರಷ್ಟು ಪಿಂಚಣಿಗೆ ಚೆನ್ನೈ ಮೂಲದ ಆಡಳಿತಾತ್ಮಕ ಸದಸ್ಯರೊಬ್ಬರು ಸ್ಪಷ್ಟಪಡಿಸಿದ್ದಾರೆ. 2010ರಿಂದ ನ್ಯಾಯ ಮಂಡಳಿ ಈ ಪ್ರಕರಣದ ವಿಚಾರಣೆ ನಡೆಸುತ್ತಿತ್ತು. ಎರಡನೇ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದ ಹಿರಿಯ ಯೋಧ ಹಾಗೂ ಅವರ ಕುಟುಂಬಕ್ಕೆ ಇದು ಸಂತಸದ ಸುದ್ದಿ ಎಂದು ಸಿಂಗ್ ಅವರ ಪರ ವಕೀಲ ನಿವೃತ್ತ ಕರ್ನಲ್ ಎಸ್.ಬಿ.ಸಿಂಗ್ ಪ್ರತಿಕ್ರಿಯಿಸಿದ್ದಾರೆ.