Thursday, 12th December 2024

ಟೊಮೆಟೊಗೆ ರಕ್ಷಣೆ: ಜಮೀನಿನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ

ಔರಂಗಾಬಾದ್: ಟೊಮ್ಯಾಟೊ ಬೆಲೆ ಗಗನಕ್ಕೇರುತ್ತಿರುವ ಹಿನ್ನಲೆ ಮಹಾರಾಷ್ಟ್ರದ ರೈತರೊಬ್ಬರು ಟೊಮೆಟೊವನ್ನು ಕಳ್ಳರಿಂದ ರಕ್ಷಿಸಿಕೊಳ್ಳಲು ತಮ್ಮ ಜಮೀನಿನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ ಕುರಿತು ವರದಿಯಾಗಿದೆ.

ದೇಶದಾದ್ಯಂತ ಟೊಮೆಟೊ 100 ರಿಂದ 200 ರೂ. ರವರೆಗೆ ಮಾರಾಟವಾಗುತ್ತಿದೆ. ಔರಂಗಾಬಾದ್ ನಿಂದ ಸುಮಾರು 20 ಕಿಮೀ ದೂರದಲ್ಲಿರುವ ಶಹಪುರ್ ಬಂಜಾರ್ ನಲ್ಲಿ ‘ಟೊಮೆಟೊ ಕಳ್ಳರು ನನ್ನ ಹೊಲಕ್ಕೆ ಬಂದು 25-25 ಕೆಜಿ ಟೊಮೊಟೊ ಕದ್ದುಕೊಂಡ ಹೋದ ನಂತರ ನನ್ನ ಜಮೀನಿಗೆ 22,000 ರೂ. ಖರ್ಚು ಮಾಡಿ ಸಿಸಿಟಿವಿ ಇರಿಸಿದ್ದೇನೆ’ ಎಂದು ಬೆಳೆಗಾರ ಶರದ್ ರಾವ್ಟೆ ಹೇಳಿದರು.

ಇಂದು ಅತಿ ಹೆಚ್ಚು ಬೇಡಿಕೆಯ ತರಕಾರಿಯಾಗಿರುವ ಟೊಮೆಟೊಗಳನ್ನು ಕಳೆದುಕೊಳ್ಳಲು ನಾವು ಸಿದ್ಧವಿಲ್ಲ. 22-25 ಕೆಜಿ ಟೊಮೆಟೊ ಈಗ 3 ಸಾವಿರ ರೂ.ಗೆ ಮಾರಾಟವಾಗುತ್ತಿದೆ.

5 ಎಕರೆ ತೋಟದ ಪೈಕಿ 1.5 ಎಕರೆಯಲ್ಲಿ ಟೊಮ್ಯಾಟೊ ಬೆಳೆದಿದ್ದು ಇದರಿಂದ ಸುಲಭವಾಗಿ 6-7 ಲಕ್ಷ ರೂ. ಸಿಗುತ್ತದೆ ಎಂದು ರೈತ ಶರದ್ ರಾವ್ಟೆ ತಿಳಿಸಿರುವುದಾಗಿ ವರದಿಯಾಗಿದೆ.