Sunday, 15th December 2024

ಸ್ಮಶಾನದಲ್ಲಿ ಚಾವಣಿ ಕುಸಿತ ಪ್ರಕರಣ: ಮೂವರ ಬಂಧನ

ಘಾಜಿಯಾಬಾದ್‌: ಉತ್ತರ ಪ್ರದೇಶ ರಾಜ್ಯದ ಮುರಾದ್‌ನಗರದ ಸ್ಮಶಾನದಲ್ಲಿ ಭಾನುವಾರ ಸಂಭವಿಸಿದ ಚಾವಣಿ ಕುಸಿತ ದುರಂತದಲ್ಲಿ ಸತ್ತವರ ಸಂಖ್ಯೆ 24ಕ್ಕೆ ಏರಿದ್ದು, ಘಟನೆಗೆ ಸಂಬಂಧಿಸಿದಂತೆ ಘಾಜಿಯಾಬಾದ್ ಪೊಲೀಸರು ಪಾಲಿಕೆಯ ಮೂವರು ಅಧಿಕಾರಿಗಳನ್ನು ಸೋಮವಾರ ಬಂಧಿಸಿದ್ದಾರೆ.

ಪಾಲಿಕೆಯ ಕಾರ್ಯನಿರ್ವಹಣಾಧಿಕಾರಿ ನಿಹಾರಿಕಾ ಸಿಂಗ್‌, ಜೂನಿಯರ್ ಎಂಜಿನಿಯರ್ ಚಂದ್ರಪಾಲ್ ಮತ್ತು ಸೂಪರ್‌ವೈಸರ್ ಆಶಿಶ್ ಅವರನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇರಾಜ್‌ ರಾಜಾ ತಿಳಿಸಿದ್ದಾರೆ. ತಲೆಮರೆಸಿಕೊಂಡಿರುವ ಗುತ್ತಿಗೆದಾರರ ಅಜಯ್‌ ತ್ಯಾಗಿ ಅವರಿಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ.

ಮೃತರ ಕುಟುಂಬದವರು ಹೆಚ್ಚುವರಿ ಪರಿಹಾರ ಹಾಗೂ ಪ್ರತಿ ಕುಟುಂಬಕ್ಕೆ ಸರ್ಕಾರಿ ಕೆಲಸ ನೀಡುವಂತೆ ಒತ್ತಾಯಿಸಿ ದೆಹಲಿ -ಮೀರತ್ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಶವಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸ್ಮಶಾನಕ್ಕೆ ತೆರಳಿದ್ದ 24 ಮಂದಿ, ಸುರಿಯುತ್ತಿದ್ದ ಮಳೆಯಿಂದ ರಕ್ಷಣೆ ಪಡೆಯಲು ಸ್ಮಶಾನದ ಸಂಕೀರ್ಣವೊಂದರ ಚಾವಣಿಯ ಕೆಳಗೆ ನಿಂತಿದ್ದರು. ಚಾವಣಿ ಕುಸಿದ ಪರಿಣಾಮ ಸ್ಥಳದಲ್ಲೇ 15 ಮಂದಿ ಸಾವನ್ನಪ್ಪಿದ್ದರು.

ಘಟನೆಯಲ್ಲಿ ಮೃತಪಟ್ಟವರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಸಂಬಂಧಿಕರಿಗೆ ತಲಾ ₹ 2ಲಕ್ಷ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.