Sunday, 15th December 2024

Train Accident: ಪೆಟ್ರೋಲಿಯಂ ಉತ್ಪನ್ನ ಸಾಗಿಸುತ್ತಿದ್ದ ಗೂಡ್ಸ್ ರೈಲು ಹಳಿ ತಪ್ಪಿ ಪಲ್ಟಿ

train accident

ಭೋಪಾಲ್‌: ಪೆಟ್ರೋಲಿಯಂ ಉತ್ಪನ್ನ (Petroleum products) ಸಾಗಿಸುತ್ತಿದ್ದ ಗೂಡ್ಸ್ ರೈಲಿನ (Goods Train) 3 ವ್ಯಾಗನ್‌ಗಳು ಹಳಿತಪ್ಪಿ ಉರುಳಿದ (train Accident) ಘಟನೆ ಮಧ್ಯಪ್ರದೇಶದ (Madhya Pradesh) ರತ್ಲಾಮ್‌ ಎಂಬಲ್ಲಿ ನಡೆದಿದೆ.

ಗುರುವಾರ ತಡರಾತ್ರಿ ಮಧ್ಯಪ್ರದೇಶದ ರತ್ಲಾಮ್ ಬಳಿ ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸುತ್ತಿದ್ದ ಗೂಡ್ಸ್ ರೈಲಿನ ಮೂರು ವ್ಯಾಗನ್‌ಗಳು ಹಳಿತಪ್ಪಿದವು. ರಾಜ್‌ಕೋಟ್‌ನಿಂದ ಭೋಪಾಲ್ ಬಳಿಯ ಬಕಾನಿಯಾ-ಭೌರಿಗೆ ವ್ಯಾಗನ್‌ಗಳನ್ನು ಸಾಗಿಸುತ್ತಿದ್ದಾಗ ದೆಹಲಿ-ಮುಂಬೈ ಮಾರ್ಗದ ರೈಲ್ವೆ ಯಾರ್ಡ್ ಬಳಿ ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಹಳಿತಪ್ಪಿದ ವ್ಯಾಗನ್ ಒಂದರಿಂದ ಪೆಟ್ರೋಲಿಯಂ ಉತ್ಪನ್ನಗಳು ಸೋರಿಕೆಯಾಗಿದೆ. ವ್ಯಾಗನ್‌ಗಳಲ್ಲಿ ಒಂದರಿಂದ ಪೆಟ್ರೋಲಿಯಂ ಉತ್ಪನ್ನಗಳ ಸೋರಿಕೆ ಆಗುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೇವೆ ಎಂದು ರತ್ಲಾಮ್‌ನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ(ಡಿಆರ್‌ಎಂ) ರಜನೀಶ್ ಕುಮಾರ್ ಹೇಳಿದ್ದಾರೆ.

ಜನರು ಹಳಿ ತಪ್ಪಿದ ವ್ಯಾಗನ್‌ಗಳಿಂದ ದೂರವಿರಲು ಮತ್ತು ಸಿಗರೇಟ್ ಅಥವಾ ಬೀಡಿಗಳನ್ನು ಹಚ್ಚಬಾರದು ಎಂದು ಸಲಹೆ ನೀಡಲಾಗಿದೆ. ರೈಲ್ವೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಕಾರ್ಯಾಚರಣೆ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ರೈಲಿನ ಮೂರು ಬೋಗಿಗಳು ಹಳಿತಪ್ಪಿವೆ, ಒಂದು ಕೋಚ್‌ ಮೇಲೆತ್ತಲಾಗಿದೆ, ಎರಡನೆಯದರಲ್ಲಿ ಸ್ವಲ್ಪ ತೊಂದರೆಯಿದೆ. ಮೂರನೆಯದರಲ್ಲಿ ಸಣ್ಣ ಸಮಸ್ಯೆಯಿದೆ, ಆದರೆ ಅದು ಕೂಡ ಶೀಘ್ರದಲ್ಲೇ ಸರಿಪಡಿಸಲಾಗುವುದು. ನಾವು ಯಾವುದೇ ರೈಲುಗಳನ್ನು ರದ್ದುಗೊಳಿಸುತ್ತಿಲ್ಲ. ಘಟನೆಯಿಂದಾಗಿ ಸದ್ಯಕ್ಕೆ ಕೇವಲ ಎರಡು ರೈಲುಗಳು ಮಾತ್ರ ನಿಂತಿದ್ದು, ಶೀಘ್ರ ಸಂಚಾರ ಆರಂಭಿಸಲಿವೆ ಎಂದು ಡಿಆರ್‌ಎಂ ರಜನೀಶ್‌ ಕುಮಾರ್‌ ಹೇಳಿದ್ದಾರೆ.

ಇದನ್ನೂ ಓದಿ: Viral video: ಬೆಂಗಳೂರಿನಲ್ಲಿ ಟ್ರಾಫಿಕ್‌ ಜಾಮ್‌ಗೆ ಅಂಜಿ ನಿಂತ ರೈಲು! ರೈಲ್ವೇ ಇಲಾಖೆ ಹೇಳಿದ್ದೇನು?