Sunday, 15th December 2024

Train Accident : ವಿಧ್ವಂಸಕ ಕೃತ್ಯದಿಂದಾಗಿ ಭಾಗಮತಿ ರೈಲು ಅಪಘಾತ?

Train Accident

ಬೆಂಗಳೂರು: ತಮಿಳುನಾಡಿನ ಕವರೈಪೆಟ್ಟೈ ರೈಲ್ವೆ ನಿಲ್ದಾಣದಲ್ಲಿ ಮೈಸೂರಿನಿಂದ ಹೊರಟಿದ್ದ ಭಾಗಮತಿ ಎಕ್ಸ್‌ಪ್ರೆಸ್‌ ರೈಲು ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿರುವುದು (Train Accident) ವಿಧ್ವಂಸಕ ಕೃತ್ಯಗಳಿಂದಾಗಿ ಎಂಬ ಅನುಮಾನವನ್ನು ತನಿಖಾ ತಂಡ ವ್ಯಕ್ತಪಡಿಸಿದೆ. ಘಟನೆ ನಡೆದ ಗಂಟೆಗಳ ನಂತರ, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆಗಾಗಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ.

ಮೂಲಗಳ ಪ್ರಕಾರ, ಟ್ರ್ಯಾಕ್ ಗೆ ಹಾನಿ ಮಾಡಿರುವ ಕಾರಣ ಘಟನೆ ಸಂಭವಿಸಿರಬಹುದು ಎಂದು ಎನ್ಐಎ ಶಂಕಿಸಿದೆ. ಆರಂಭಿಕ ಸಂಶೋಧನೆಗಳು ಟ್ರ್ಯಾಕ್ ಗಳಿಂದ ಬೋಲ್ಟ್‌ಗಳು ಮತ್ತು ಇತರ ಘಟಕಗಳು ಕಾಣೆಯಾಗಿರುವುದು ಪತ್ತೆಯಾಗಿದೆ. ಇದು ಮೋಸದ ಅನುಮಾನ ಹುಟ್ಟುಹಾಕಿದೆ. ಅಲ್ಲದೆ, ಟ್ರ್ಯಾಕ್ ಸುತ್ತಿಗೆಯಿಂದ ಹೊಡೆಯಲಾಗಿದೆ ಎಂದು ಹೇಳಲಾಘಿದೆ. ಘಟನೆಯ ನಿಖರ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ.

ಯಾವಾಗ ನಡೆದ ಘಟನೆ?

ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಕವರೈಪೆಟ್ಟೈ ರೈಲು ನಿಲ್ದಾಣದಲ್ಲಿ ಶುಕ್ರವಾರ ತಡರಾತ್ರಿ 12578 ಮೈಸೂರು-ದರ್ಬಾಂಗ ಭಾಗ್ಮತಿ ಎಕ್ಸ್‌ಪ್ರೆಸ್ ನಿಂತಿದ್ದ ಗೂಡ್ಸ್‌ ರೈಲಿಗೆ ಡಿಕ್ಕಿ(Chennai Train Accident) ಹೊಡೆದು 19 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದೀಗ ಈ ಭೀಕರ ದುರಂತದ ಡ್ರೋನ್‌ ವಿಶುವಲ್‌(Drone Visual) ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ರೈಲು ಮುಖ್ಯ ಮಾರ್ಗದ ಬದಲಿಗೆ ಲೂಪ್ ಲೈನ್ ಅನ್ನು ಪ್ರವೇಶಿಸಿದ ಪರಿಣಾಮ ಕನಿಷ್ಠ 12 ಬೋಗಿಗಳು ಹಳಿತಪ್ಪಿದೆ. ಈ ವೇಳೆ ಹಲವಾರು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಚೆನ್ನೈ ಸಮೀಪದ ತಿರುವಳ್ಳೂರು ಜಿಲ್ಲೆಯ ಕವರೈಪ್ಪೆಟ್ಟೈ ರೈಲು ನಿಲ್ದಾಣದಲ್ಲಿಈ ದುರ್ಘಟನೆ ಸಂಭವಿಸಿದ್ದು, ರೈಲು ಸಂಖ್ಯೆ 12578 ಮೈಸೂರು – ದರ್ಭಾಂಗ ಬಾಗ್ಮತಿ ಎಕ್ಸ್‌ಪ್ರೆಸ್ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. 1,360 ಪ್ರಯಾಣಿಕರು ರೈಲಿನಲ್ಲಿದ್ದರು. 19 ಪ್ರಯಾಣಿಕರು ಗಾಯಗೊಂಡಿದ್ದಾರೆ ಮತ್ತು ಅವರಲ್ಲಿ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು. ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲಎಂದು ತಿರುವಳ್ಳೂರು ಜಿಲ್ಲಾಧಿಕಾರಿ ಡಾ.ಟಿ.ಪ್ರಭುಶಂಕರ್ ತಿಳಿಸಿದ್ದಾರೆ.

ರಾಹುಲ್ ಗಾಂಧಿ, ಉದಯನಿಧಿ ಕೇಂದ್ರಕ್ಕೆ ಮನವಿ

ಈ ಘಟನೆಯನ್ನು ಬಾಲಸೋರ್ ರೈಲು ಅಪಘಾತಕ್ಕೆ ಹೋಲಿಸಿ ರಾಹುಲ್ ಗಾಂಧಿ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. “ಮೈಸೂರು-ದರ್ಬಾಂಗ ರೈಲು ಅಪಘಾತವು ಭೀಕರ ಬಾಲಸೋರ್ ದುರಂತವನ್ನು ನೆನಪಿಸುತ್ತದೆ. ಹಲವಾರು ಅಪಘಾತಗಳ ಹೊರತಾಗಿಯೂ ಸರ್ಕಾರ ಯಾವುದೇ ಪಾಠಗಳನ್ನು ಕಲಿತಿಲ್ಲ. ಈ ಸರ್ಕಾರವು ಎಚ್ಚೆತ್ತುಕೊಳ್ಳುವ ಮೊದಲು ಇನ್ನೂ ಎಷ್ಟು ಕುಟುಂಬಗಳನ್ನು ನಾಶಪಡಿಸಬೇಕು? ಎಂದು ಪ್ರಶ್ನಿಸಿದ್ದಾರೆ.

ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಚೆನ್ನೈನ ಸರ್ಕಾರಿ ಸ್ಟಾನ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಭೇಟಿ ನೀಡಿದರು. ಇಂತಹ ಅಪಘಾತಗಳನ್ನು ತಡೆಗಟ್ಟಲು ಬಲವಾದ ಕ್ರಮಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.