Wednesday, 6th November 2024

Train Accident : ಇತ್ತೀಚಿನ ದಿನಗಳಲ್ಲಿ ರೈಲು ಅಪಘಡ ಹೆಚ್ಚಳವಾಗಲು ಕಾರಣಗಳೇನು? ಇಲ್ಲಿದೆ ಸತ್ಯ ಸಂಗತಿ

Train Accident

ಬೆಂಗಳೂರು: ದೇಶಾದ್ಯಂತ ವಿವಿಧ ಕಡೆಗಳಲ್ಲಿ ನಡೆದ ರೈಲ್ವೇ ಅವಘಡಗಳೇ (Train Accident) ಈ ಬಾರಿ ಸುದ್ದಿಯ ಹೆಡ್ ಲೈನ್ ಆಗುವಂತಾಗಿದ್ದು ಖೇದಕರ ವಿಚಾರವೇ ಸರಿ. ಇದಕ್ಕೆ ಇನ್ನೊಂದು ಸೇರ್ಪಡೆ ಎಂಬಂತೆ, ಮೈಸೂರು-ದರ್ಭಾಂಗ್ ಎಕ್ಸ್ ಪ್ರೆಸ್ ರೈಲು ದಕ್ಷಿಣ ರೈಲ್ವೇ ವಲಯದ ಚೈನ್ನೈ ವಿಭಾಗ ವ್ಯಾಪ್ತಿಯಲ್ಲಿ ಬರುವ ಕಾವರಪೆಟ್ಟೈ ಎಂಬಲ್ಲಿ ಅ.11ರಂದು ಗೂಡ್ಸ್ ರೈಲಿಗೆ ಅಪ್ಪಳಿಸುವ ಮೂಲಕ ಮತ್ತೊಂದು ರೈಲು ದುರಂತ ಸಂಭವಿಸಿತು. ಈ ದುರ್ಘಟನೆಯಲ್ಲಿ 12ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡರು.

ಇದೇ ರೀತಿಯಲ್ಲಿ ಮಥುರಾ ಹಾಗೂ ಜಾರ್ಖಂಢ್ ಗಳಲ್ಲಿ ಎರಡು ಗೂಡ್ಸ್ ರೈಲುಗಳು ಸೆಪ್ಟೆಂಬರ್ ತಿಂಗಳಿನಲ್ಲಿ ಹಳಿತಪ್ಪಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಅದೇ ರೀತಿಯಲ್ಲಿ ಜುಲೈ 30ರಂದು ಹೌರಾ-ಮುಂಬಯಿ ಮೈಲ್ ರೈಲು ಹಳಿತಪ್ಪಿ ಗೂಡ್ಸ್ ರೈಲುಗಾಡಿಗೆ ಡಿಕ್ಕಿ ಹೊಡೆದ ಘಟನೆ ಜಾರ್ಖಂಡ್ ನ ಸಿರೈಕೆಲಾ-ಖರ್ಸ್ವಾನ್ ಜಿಲ್ಲೆಯಲ್ಲಿ ಸಂಭವಿಸಿತ್ತು. ಇನ್ನು, ಅಗರ್ತಲಾದಿಂದ ಕೊಲ್ಕತ್ತಾದ ಸೀಲ್ದಾಗೆ ಸಂಚರಿಸುತ್ತಿದ್ದ ಕಾಂಚನಜುಂಗಾ ಎಕ್ಸ್ ಪ್ರೆಸ್ ರೈಲು ಜು.17ರಂದು ರಂಗಪಾನಿ ಎಂಬಲ್ಲಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು 11 ಪ್ರಯಾಣಿಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು. ವರದಿಗಳು ಹೇಳುವಂತೆ ಈ ವರ್ಷದ ಪ್ರಥಮ ಏಳು ತಿಂಗಳಲ್ಲಿ ಸರಿಸುಮಾರು ರೈಲು ಹಳಿ ತಪ್ಪಿದ 19 ಪ್ರಕರಣಗಳು ನಡೆದಿದ್ದು, ಈ ದುರ್ಘಟನೆಗಳಲ್ಲಿ ಹಲವಾರು ಸಾವು-ನೋವುಗಳು ಸಂಭವಿಸಿವೆ.
ಇದೇ ರೀತಿಯಲ್ಲಿ ಕಳೆದ ಐದು ವರ್ಷಗಳಲ್ಲಿ, ಭಾರತೀಯ ರೈಲ್ವೇಯ 17 ವಿಭಾಗಗಳ ವ್ಯಾಪ್ತಿಯಲ್ಲಿ ಸಂಭವಿಸಿದ ವಿವಿಧ 200 ರೈಲು ಅಪಘಾತ ಪ್ರಕರಣಗಳಲ್ಲಿ 351 ಜನರು ತಮ್ಮ ಜೀವ ಕಳೆದುಕೊಂಡಿದ್ದರೆ, 970 ಜನರು ಗಾಯಗೊಂಡಿರುವುದು ಶಾಕಿಂಗ್ ವಿಚಾರವೇ ಸರಿ.

ಇಷ್ಟು ಮಾತ್ರವಲ್ಲದೇ ಇಂತಹ ದುರ್ಘಟನೆಗಳು ಸಂಭವಿಸಿದಾಗ ಆ ವ್ಯಾಪ್ತಿಯಲ್ಲಿ ಸಂಚರಿಸುವ ಇತರೇ ರೈಲುಗಳ ಸಂಚಾರ ಸಮಯದಲ್ಲೂ ವ್ಯತ್ಯಯಗಳುಂಟಾಗುತ್ತವೆ. ಚೆನ್ನೈ ರೈಲು ದುರಂತದ ಘಟನೆಯು 2023ರಲ್ಲಿ ಬಾಲಾಸೋರ್ ನಲ್ಲಿ ನಡೆದ ರೈಲು ದುರಂತದ ರೀತಿಯಲ್ಲೇ ನಡೆದಿದೆ, ಎರಡೂ ಕಡೆಗಳಲ್ಲಿ ಮೂರು ರೈಲುಗಳ ನಡುವೆ ಅಪಘಾತ ಸಂಭವಿಸಿತ್ತು. ಒಟ್ಟು 296 ಜನರ ಪ್ರಾಣಹಾನಿಗೆ ಕಾರಣವಾಗಿದ್ದ ಬಾಲಾಸೋರ್ ರೈಲು ದುರಂತವು ದೇಶದ ರೈಲ್ವೇ ಇತಿಹಾಸದಲ್ಲೇ ಘನಘೋರ ರೈಲು ದುರಂತ ಎಂದೇ ಗುರುತಿಸಲ್ಪಟ್ಟಿದೆ.

ಭಾರತೀಯ ರೈಲ್ವೇ ಎಂಬುದು ವಿಶ್ಚದಲ್ಲೇ ಅತೀ ದೊಡ್ಡ ಮತ್ತು ನಿಬಿಡ ರೈಲ್ವೇ ನೆಟ್ವರ್ಕ್ ಗಳಲ್ಲಿ ಒಂದಾಗಿದೆ. ಪ್ರತೀದಿನ ಲಕ್ಷಾಂತರ ಪ್ರಯಾಣಿಕರು ಮತ್ತು ಟನ್ ಗಟ್ಟಲೆ ಸರಕು ರೈಲಿನ ಮೂಲಕ ದೇಶದ ಮೂಲೆ ಮೂಲೆಗೆ ಸಂಚರಿಸುತ್ತಾರೆ. ಆದರೆ ಇಂತಹ ರೈಲು ದುರಂತಗಳು ಕೋಟ್ಯಂತರ ಭಾರತೀಯ ರೈಲ್ವೇ ಪ್ರಯಾಣಿಕರನ್ನು ಹೊತ್ತು ಸಾಗುವ ನಮ್ಮ ರೈಲ್ವೇ ವ್ಯವಸ್ಥೆಯ ಮೇಲೆಯೇ ಬಹುದೊಡ್ಡ ಪ್ರಶ್ನಾರ್ಥಕ ಚಿಹ್ನೆ ಮೂಡುವಂತೆ ಮಾಡಿದೆ.

ಓಬಿರಾಯನ ಕಾಲದ ರೈಲ್ವೇ ತಂತ್ರಜ್ಞಾನ!

ಇತ್ತೀಚಿನ ರೈಲು ಹಳಿ ತಪ್ಪುತ್ತಿರು ಪ್ರಕರಣಗಳು ಕಳಪೆ ಟ್ರ್ಯಾಕ್ ನಿರ್ವಹಣೆ, ಪ್ರಯಾಣಿಕರ ದಟ್ಟಣೆ, ಕಾರ್ಯವೈಖರಿಯಲ್ಲಿನ ತಪ್ಪುಗಳು, ಓಬಿರಾಯನ ಕಾಲದ ಸಿಗ್ನಲ್ ವ್ಯವಸ್ಥೆ, ಹವಾಮಾನ ಇತ್ಯಾದಿ ಕಾರಣಗಳಿಂದಲೇ ನಡೆದಿರುವಂತದ್ದಾಗಿದೆ. ಇನ್ನು ಮಾನವ ಸಹಜ ತಪ್ಪುಗಳಾಗಿರುವ ಚಾಲಕರಲ್ಲಿನ ಅತೀ ಸುಸ್ತು ಮತ್ತು ಅಜಾಗರೂಕತೆ, ಸಂವಹನ ವ್ಯವಸ್ಥೆಯಲ್ಲಿನ ಲೋಪಗಳು ಮತ್ತು ರೈಲುಗಳ ಕೊರತೆಯೂ ಸಹ ಇಂತಹ ದುರಂತಕ್ಕೆ ಪ್ರಮುಖ ಕಾರಣಗಳಾಗಿವೆ. ಇಷ್ಟು ಮಾತ್ರವಲ್ಲದೇ ಪ್ರಾಕೃತಿಕ ಕಾರಣಗಳಾಗಿರುವ ಭೂಕುಸಿತ, ಭಾರೀ ಮಳೆ ಮತ್ತು ನೆರೆ ಪರಿಸ್ಥಿತಿಗಳೂ ರೈಲು ದುರಂತಕ್ಕೆ ತಮ್ಮ ಕೊಡುಗೆಯನ್ನು ನೀಡುತ್ತಿವೆ!

ಇನ್ನು, ರೈಲುಗಳಲ್ಲಿ ಮಿತಿಮೀರಿದ ಸಂಖ್ಯೆಯಲ್ಲಿ ಪ್ರಯಾಣಿಸುವುದು ಮತ್ತು ಅತೀ ಹೆಚ್ಚಿನ ಸರಂಜಾಮುಗಳ ಸಾಗಾಟದಿಂದಾಗಿ ರೈಲು ಹಳಿಗಳ ಮೇಲೆ ಹಾಗೂ ರೈಲು ಬೋಗಿಗಳ ಮೇಲೂ ಅತಿಯಾದ ಒತ್ತಡ ಸೃಷ್ಟಿಯಾಗುವಂತೆ ಮಾಡುತ್ತದೆ. ಈ ಕಾರಣಗಳಿಂದಲೂ ರೈಲು ಅಪಘಾತಗಳು ಸಂಭವಿಸುವ ಸಾಧ್ಯತೆಗಳಿವೆ.
ಇದಕ್ಕೆ ಪೂರಕವೆಂಬಂತೆ ಹೇಳಿಕೆಯೊಂದನ್ನು ನೀಡಿರುವ ರೈಲ್ವೇ ಸುರಕ್ಷಿತ ಅಧಿಕಾರಿಯೊಬ್ಬರು, ‘ಇದೊಂದು ಸಂಪೂರ್ಣ ವೈಫಲ್ಯವಾಗಿದೆ ಮತ್ತು ರೈಲಿನ ಕಂಬಿಗಳ, ಬೋಗಿಗಳ ಅಸಮರ್ಪಕ ನಿರ್ವಹಣೆಯನ್ನು ಕಡ್ಡಾಯವಾಗಿ ಪಾಲಿಸದಿರುವುದೂ ಇಂತಹ ದುರಂತಗಳಿಗೆ ಕಾರಣವಾಗಿದೆ..” ಎಂದು ಹೇಳುತ್ತಾರೆ.

ಸುರಕ್ಷತೆಯೇ ಆದ್ಯತೆಯಾಗಲಿ

ಇನ್ನು, ದೇಶದಲ್ಲಿ ರೈಲ್ವೇ ದುರಂತಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ರೈಲ್ವೇ ಸುರಕ್ಷತಾ ತಜ್ಞರು ಕೆಲವೊಂದು ಸಲಹೆಗಳನ್ನು ನೀಡಿದ್ದು, ಅದಕ್ಕೆ ಪೂರಕವಾಗಿ ಭಾರತೀಯ ರೈಲ್ವೇಯೂ ಸಹ ಹಲವಾರು ಸುರಕ್ಷತಾ ಕ್ರಮಗಳ ಹಂತ ಹಂತದ ಅನುಷ್ಠಾನಕ್ಕೆ ಮುಂದಾಗಿದೆ. ಇದರಂತೆ, ಸಿಗ್ನಲ್ ಗಳಲ್ಲಿ ಹಾಗೂ ದೂರಸಂಪರ್ಕ ವ್ಯವಸ್ಥೆಯಲ್ಲಿ ತಂತ್ರಜ್ಞಾನವನ್ನು ಅಪ್ ಗ್ರೇಡ್ ಮಾಡುವ ಕೆಲಸಗಳು ಪ್ರಗತಿಯಲ್ಲಿವೆ. ಇದಕ್ಕೆ ಪೂರಕವಾಗಿ 15 ಸಾವಿರ ಕಿಲೋ ಮೀಟರ್ ನಷ್ಟು ರೈಲ್ವೇ ನೆಟ್ವರ್ಕ್ ನಲ್ಲಿ ಕವಚ್ ಎಂಬ ಸುರಕ್ಷತಾ ವಿಧಾನವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕವಚ್ ಎಂಬುದು ರೈಲುಗಳ ಡಿಕ್ಕಿಯನ್ನು ತಪ್ಪಿಸುವ ಒಂದು ಸ್ವಯಂಚಾಲಿತ ವಿಧಾನವಾಗಿದೆ. ಮುಂಬರುವ ದಿನಗಳಲ್ಲಿ ಈ ವ್ಯವಸ್ಥೆಯನ್ನು 37 ಸಾವಿರ ಕಿಲೋ ಮೀಟರ್ ರೈಲ್ವೇ ಜಾಲಕ್ಕೆ ವಿಸ್ತರಿಸುವ ಯೋಜನೆಯನ್ನೂ ಸಹ ಹಾಕಿಕೊಳ್ಳಲಾಗಿದೆ.

ಇದನ್ನೂ ಓದಿ: Train Accident : ರೈಲು ಹಳಿಯಲ್ಲಿ ಗ್ಯಾಸ್ ಸಿಲಿಂಡರ್ ಪತ್ತೆ; ತಪ್ಪಿನ ದೊಡ್ಡ ಅನಾಹುತ

ರೈಲ್ವೇ ತಜ್ಞರ ಪ್ರಕಾರ, ಈಗಿರುವ ರೈಲ್ವೇ ಜಾಲಗಳಲ್ಲಿ ರೈಲುಗಳ ಸಂಚಾರ ವ್ಯತ್ಯಯವಾಗದಂತೆ ಕವಚ ವ್ಯವಸ್ಥೆಯನ್ನು ಅಳವಡಿಸುವುದು ಭಾರೀ ಸವಾಲಿನ ಕಾರ್ಯವಾಗಿದೆ. ಮಾತ್ರವಲ್ಲದೇ, ಕವಚ ವ್ಯವಸ್ಥೆಯು ಎಲ್ಲಾ ರೈಲು ಢಿಕ್ಕಿಗಳನ್ನು ತಪ್ಪಿಸುವುದಿಲ್ಲ, ಮುಖ್ಯವಾಗಿ ಸೈಡ್ ಟ್ರ್ಯಾಕ್ ಅಪಘಾತಗಳನ್ನು ಕವಚ ವ್ಯವಸ್ಥೆಯ ಮೂಲಕ ತಪ್ಪಿಸಲು ಸಾಧ್ಯವಿಲ್ಲ” ಎಂಬುದು ನಿವೃತ್ತ ರೈಲ್ವೇ ಅಧಿಕಾರಿಯೊಬ್ಬರ ಅಭಿಪ್ರಾಯವಾಗಿದೆ.

ಭಾರತದಲ್ಲಿ ರೈಲ್ವೇ ಇಲಾಖೆಯ ವರಮಾನ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದರೂ ಸಹ, ರೈಲ್ವೇಯಲ್ಲಿ ಸಂಭವಿಸುತ್ತಿರುವ ಅವಘಡಗಳನ್ನು ಶೂನ್ಯ ಮಟ್ಟಕ್ಕಿಳಿಸಲು ಅಗತ್ಯವಿರುವ ಕ್ರಮಗಳನ್ನು ಜಾರಿಗೊಳಿಸಲು ಹಣ ನೀಡದೇ ಇರುವುದು ನಮ್ಮ ಆಡಳಿತ ವ್ಯವಸ್ಥೆ ಮತ್ತು ಸಂಬಂಧಪಟ್ಟ ಇಲಾಖೆಯ ಉನ್ನತ ಅಧಿಕಾರಿಗಳ ಔದಾಸಿನ್ಯ ಪ್ರವೃತ್ತಿಗೊಂದು ಉದಾಹರಣೆಯಾಗಿದೆ ಎಂದರೆ ತಪ್ಪಾಗಲಾರದು.