Saturday, 26th October 2024

Train derailment Attempt: ತಪ್ಪಿದ ಭಾರೀ ರೈಲು ದುರಂತ; ಹಳಿ ಮೇಲೆ ಮರದ ದಿಮ್ಮಿ ಇಟ್ಟು ಮತ್ತೆ ಕಿಡಿಗೇಡಿಗಳಿಂದ ದುಷ್ಕೃತ್ಯ

train derailment

ಲಕ್ನೋ: ಇತ್ತೀಚಿನ ದಿನಗಳಲ್ಲಿ ರೈಲುಗಳನ್ನು ಗುರಿಯಾಗಿಸಿ ಕಿಡಿಗೇಡಿಗಳು ದುಷ್ಕೃತ್ಯಕ್ಕೆ ಯತ್ನಿಸುತ್ತಿರುವ ಘಟನೆಗಳು(Train derailment Attempt) ಆಗಾಗ ಬೆಳಕಿಗೆ ಬರುತ್ತಿವೆ. ಇದೀಗ ಮತ್ತೆ ಅಂತಹದ್ದೇ ಒಂದು ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ರೈಲ್ವ ಹಳಿ ಮೇಲೆ ದುಷ್ಕರ್ಮಿಗಳು 6ಕೆ.ಜಿ ತೂಕದ ಮರದ ತುಂಡನ್ನು ಇಟ್ಟು ರೈಲು ಹಳಿ ತಪ್ಪಿಸಲು ಸಂಚು ರೂಪಿಸಿದ್ದಾರೆ. ಅದೃಷ್ಟವಶಾತ್‌ ಯಾವುದೇ ಅನಾಹುತ ಸಂಭವಿಸಿಲ್ಲ.

ದೆಹಲಿ ಮತ್ತು ಲಕ್ನೋ ನಡುವೆ ಓಡುತ್ತಿರುವ ಪ್ಯಾಸೆಂಜರ್ ರೈಲು ಉತ್ತರ ಪ್ರದೇಶದ ಮಲಿಹಾಬಾದ್ ಮತ್ತು ಕಾಕೋರಿ ರೈಲು ನಿಲ್ದಾಣಗಳ ನಡುವಿನ ಹಳಿಗಳಲ್ಲಿ ಸಿಲುಕಿಕೊಂಡಿದ್ದ ಎರಡು ಅಡಿ ಉದ್ದ ಮತ್ತು ಆರು ಕಿಲೋಗ್ರಾಂಗಳಷ್ಟು ಮರದ ತುಂಡಿಗೆ ಡಿಕ್ಕಿ ಹೊಡೆಡಿದೆ. ಲೋಕೋ ಪೈಲಟ್‌ ತಕ್ಷಣ ರೈಲನ್ನು ನಿಲ್ಲಿಸಿ ಸಮಯಪ್ರಜ್ಞೆ ಮೆರೆದಿದ್ದು, ಪರಿಣಾಮವಾಗಿ ಭಾರೀ ದುರಂತವೊಂದು ತಪ್ಪಿದೆ.

ರೈಲು ಸಂಖ್ಯೆ. 14236 ಬರೇಲಿ-ವಾರಣಾಸಿ ಎಕ್ಸ್‌ಪ್ರೆಸ್‌ ಹಳಿ ತಪ್ಪಿಸಲು ಕಿಡಿಗೇಡಿಗಳು ರೂಪಿಸಿದ್ದ ಸಂಚು ವಿಫಲಗೊಂಡಿದೆ. ಸುಮಾರು ಎರಡು ಗಂಟೆಗಳ ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು. ಘಟನೆ ಬಗ್ಗೆ ವರದಿಯಾಗುತ್ತಿದ್ದಂತೆ ಸ್ಥಳಕ್ಕೆ ತಕ್ಷಣ ರೈಲ್ವೆ ಮತ್ತು ಪೊಲೀಸ್ ಅಧಿಕಾರಿಗಳು ಆಗಮಿಸಿ ಮರದ ದಿಮ್ಮಿಗಳನ್ನು ತೆಗೆದಿದ್ದಾರೆ. ಇನ್ನು ಇದೊಂದು ವಿಧ್ವಂಸಕ ಕೃತ್ಯಕ್ಕೆ ನಡೆಸಲಾಗಿದ್ದ ಸಂಚು ಎಂದು ಶಂಕಿಸಿದ್ದಾರೆ ಮತ್ತು ಈ ಘಟನೆ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಈ ಘಟನೆಯು ಹಳಿಗಳ ಮೇಲಿನ ಸಿಗ್ನಲಿಂಗ್ ಸಾಧನವನ್ನು ಹಾನಿಗೊಳಿಸಿದೆ. ಇದರಿಂದ ಕೆಲ ರೈಲು ಸಂಚಾರದ ಮೇಲೆ ಬಹುದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್‌ಎಸ್‌ಎಸ್) ಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಮಲಿಹಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿಯನ್ನು (ಎಫ್‌ಐಆರ್) ದಾಖಲಿಸಲಾಗಿದೆ.

ಕಳೆದ ಭಾನುವಾರ ಉಳ್ಳಾಲ (ಕರ್ನಾಟಕ) ಬಳಿಯ ರೈಲ್ವೆ ಹಳಿಗಳ ಮೇಲೆ ಕೆಲವು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಜಲ್ಲಿ ಮತ್ತು ಕಲ್ಲುಗಳನ್ನು ಹಾಕಿದ್ದರು. ಇದಕ್ಕೂ ಮುನ್ನ ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದಲ್ಲಿ ರೈಲು ದುರಂತಕ್ಕೆ ಸಂಚು ರೂಪಿಸಿದ್ದು, ಅದೃಷ್ಟವಶಾತ್‌ ಅಧಿಕಾರಿಗಳ ಸಮಯಪ್ರಜ್ಞೆಯಿಂಧ ಅವಘಡವೊಂದು ತಪ್ಪಿತ್ತು. ಮದ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯಲ್ಲಿ ಸೇನಾ ಯೋಧರನ್ನು ಹೊತ್ತೊಯ್ಯುತ್ತಿದ್ದ ರೈಲನ್ನು ಗುರಿಯಾಗಿಸಿ ಭಾರೀ ‍ಸ್ಫೋಟಕ್ಕೆ ಸಂಚು ರೂಪಿಸಿರುವ ವಿಚಾರ ಬೆಳಕಿಗೆ ಬಂದಿತ್ತು.

ಸಗ್ಪಥಾ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಸೇನೆಯ ವಿಶೇಷ ರೈಲೊಂದು ಜಮ್ಮು-ಕಾಶ್ಮೀರದಿಂದ ಕರ್ನಾಟಕಕ್ಕೆ ಹೊರಟಿತ್ತು. ಈ ರೈಲನ್ನು ಗುರಿಯಾಗಿಸಿ ಕಿಡಿಗೇಡಿಗಳು ‍ಸ್ಫೋಟಕ್ಕೆ ಸಂಚು ರೂಪಿಸಿದ್ದರು. ರೈಲ್ವೇ ಹಳಿಯುದ್ದಕ್ಕೂ ಸ್ಫೋಟಕಗಳನ್ನು ಅಳವಡಿಸಿ ವಿಧ್ವಂಸಕ ಕೃತ್ಯಕ್ಕೆ ಪ್ಲ್ಯಾನ್‌ ಮಾಡಿಕೊಂಡಿದ್ದರು. ಸ್ಫೋಟಕಗಳ ಮೇಲೆ ರೈಲು ಹೋಗುತ್ತಿದ್ದಂತೆ ಲೋಕೋ ಪೈಲಟ್‌ಗೆ ಇದರ ಅರಿವಾಗಿದ್ದು, ತಕ್ಷಣ ರೈಲನ್ನು ನಿಲ್ಲಿಸಿದ್ದಾರೆ. ಅದೃಷ್ಟವಶಾತ್‌ ಯಾರಿಗೂ ಗಾಯಗಳಾಗಿಲ್ಲ. ಸ್ಥಳಕ್ಕೆ ಭಯೋತ್ಪಾದಕ ನಿಗ್ರಹ ದಳ(ATS) ಮತ್ತು ಎನ್‌ಐಎ ಸ್ಥಳಕ್ಕೆ ಧಾವಿಸಿ ತನಿಖೆ ಕೈಗೆತ್ತಿಕೊಂಡಿದೆ.

ಈ ಸುದ್ದಿಯನ್ನೂ ಓದಿ: Train Engine Detached: ಚೆನ್ನೈ-ಬೆಂಗಳೂರು ಮಾರ್ಗದಲ್ಲಿ ಬೋಗಿಯಿಂದ ಪ್ರತ್ಯೇಕಗೊಂಡ ರೈಲು ಎಂಜಿನ್‌; ತಪ್ಪಿದ ಭಾರಿ ಅನಾಹುತ