ನವದೆಹಲಿ: ತ್ರಿಪುರಾದಲ್ಲಿ ರಾಜಕೀಯ ಹಿಂಸಾಚಾರದ ನಡುವೆ ಗುರುವಾರ ನಾಗರಿಕ ಚುನಾವಣೆ ನಡೆಯುತ್ತಿದೆ. ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ಈಶಾನ್ಯ ರಾಜ್ಯದಲ್ಲಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲು ಸಿಬ್ಬಂದಿ ನಿಯೋಜಿಸಲಾಗಿದೆ.
ತ್ರಿಪುರ ಪೊಲೀಸ್ ಪಡೆ ಮತ್ತು ತ್ರಿಪುರಾ ರಾಜ್ಯ ರೈಫಲ್ಸ್ ಜೊತೆಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ಗಡಿ ಭದ್ರತಾ ಪಡೆ ಗಳನ್ನು (ಬಿಎಸ್‌ಎಫ್) ಸಹ ನಿಯೋಜಿಸಲಾಗುವುದು ಎಂದು ಪೊಲೀಸ್ ಮಹಾನಿರೀಕ್ಷಕ ಅರಿಂದಮ್ ನಾಥ್ ಹೇಳಿದ್ದಾರೆ.
ತ್ರಿಪುರಾದ 20 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬರುವ 644 ಮತಗಟ್ಟೆಗಳನ್ನು ಸೂಕ್ಷ್ಮ ಮತ್ತು ದುರ್ಬಲ ಎಂದು ವರ್ಗೀಕರಿಸಲಾಗಿದೆ. ಈ ಮತಗಟ್ಟೆ ಗಳಿಗೆ ಅನುಗುಣವಾಗಿ ಭದ್ರತಾ ಪಡೆಗಳನ್ನು ನಿಯೋಜನೆ ಮಾಡಲಾಗಿದೆ. ಎಂಟು ಜಿಲ್ಲೆಗಳ ಎಲ್ಲಾ 20 ಪೊಲೀಸ್ ಠಾಣೆಗಳಿಗೆ ಮೊಬೈಲ್ ಗಸ್ತು ತಿರುಗಲು ವಾಹನ ಗಳನ್ನು ಒದಗಿಸಲಾಗಿದೆ.
ಅಗರ್ತಲಾ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಇತರೆ ನಾಗರಿಕ ಸಂಸ್ಥೆಗಳ ಚುನಾವಣೆಗಳಿಗೆ ಹೆಚ್ಚುವರಿ ಯಾಗಿ 15 ಕೇಂದ್ರೀಯ ಮೀಸಲು ಪೊಲೀಸ್ ಪಡೆಯನ್ನು ಒದಗಿಸಲಾಗಿದೆ.ನಾಗರಿಕ ಚುನಾವಣೆ ಘೋಷಣೆಯ ನಂತರ ಇದುವರೆಗೆ 433 ಆರೋಪಿಗಳನ್ನು ಬಂಧಿಸಲಾಗಿದೆ.