Monday, 25th November 2024

ಸಂಸದೀಯ ನಿಯೋಗದ ಮೇಲೆ ದಾಳಿ

ಗುವಾಹಟಿ: ಚುನಾವಣೋತ್ತರ ಹಿಂಸಾಚಾರದ ಬಗ್ಗೆ ತನಿಖೆ ನಡೆಸಲು ಬಂದಿದ್ದ ಸಂಸದೀಯ ನಿಯೋಗದ ಮೇಲೆ ಬಿಜೆಪಿ ಆಡಳಿತವಿರುವ ತ್ರಿಪುರಾ ದಲ್ಲಿ ದಾಳಿ ನಡೆದಿದೆ.

ಚುನಾವಣೋತ್ತರ ತನಿಖೆ ಹಾಗೂ ಸಂತ್ರಸ್ಥ ಜನರೊಂದಿಗೆ ಮಾತುಕತೆ ನಡೆಸಲು ಸಂಸದಿಯ ನಿಯೋಗ ಎರಡು ದಿನಗಳ ಪ್ರವಾಸ ಕೈಗೊಂಡಿತ್ತು.

ತ್ರಿಪುರಾಕ್ಕೆ ಆಗಮಿಸಿರುವ ತಂಡದ ಮೇಲೆ ಬಿಸಲ್‍ಗಢ್‍ನ ನೇಹಲ್‍ಚಂದ್ರ ನಗರ ಬಜಾರ್‍ನಲ್ಲಿ ಕಿಡಿಗೇಡಿಗಳು ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ತಂಡದ ಸದಸ್ಯರು ಹೊರಾಂಗಣ ಕಾರ್ಯಕ್ರಮ ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ ಎಂದು ಸಿಪಿಐ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಜಿತೇಂದ್ರ ಚೌಧರಿ ತಿಳಿಸಿದ್ದಾರೆ.

ಸಂಸದೀಯ ತಂಡದ ಸದಸ್ಯರು ಸೆಪಹಿಜಾಲಾ ಜಿಲ್ಲೆಯ ಹಿಂಸಾಚಾರ ಪೀಡಿತ ಬಿಸಲ್‍ಗಢ್‍ಗೆ ಆಗಮಿಸಿದಾಗ ಬಿಜೆಪಿ ಬೆಂಬಲಿತರು ದಾಳಿ ಮಾಡಿ ಮೂರು ವಾಹನಗಳನ್ನು ಜಖಂಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಸಂಸದರು ಮತ್ತು ಜೊತೆಗಿದ್ದ ಕಾಂಗ್ರೆಸ್ ಮತ್ತು ಸಿಪಿಐ(ಎಂ) ಮುಖಂಡರು ಸ್ಥಳದಿಂದ ಪರಾರಿಯಾದ ಹಿನ್ನೆಲ ಯಲ್ಲಿ ಅವರು ದೊಡ್ಡ ದಾಳಿಯಿಂದ ಪಾರಾಗಿದ್ದಾರೆ ಎಂದು ಸಿಪಿಐ(ಎಂ) ಹೇಳಿಕೆಯಲ್ಲಿ ತಿಳಿಸಿದೆ.

ಪಶ್ಚಿಮ ತ್ರಿಪುರಾದ ಮೋಹನ್‍ಪುರದಲ್ಲಿ ಸಂಸದೀಯ ತಂಡಕ್ಕೆ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿದರು.

ತ್ರಿಪುರಾದ ಬಿಶಾಲ್‍ಗಢ್ ಮತ್ತು ಮೋಹನ್‍ಪುರದಲ್ಲಿ ಕಾಂಗ್ರೆಸ್ ನಾಯಕರ ನಿಯೋಗದ ಮೇಲೆ ಬಿಜೆಪಿ ಗೂಂಡಾಗಳು ದಾಳಿ ನಡೆಸಿದ್ದಾರೆ. ನಿಯೋಗದ ಜೊತೆಗಿದ್ದ ಪೊಲೀಸರು ಏನೂ ಮಾಡಲಿಲ್ಲ. ನಾಳೆ ಬಿಜೆಪಿ ಅಲ್ಲಿ ವಿಜಯೋತ್ಸವವನ್ನು ನಡೆಸುತ್ತಿದೆ. ಪಕ್ಷ ಪ್ರಾಯೋಜಿತ ಹಿಂಸಾಚಾರಕ್ಕೆ ಜಯವಾಗಲಿ ಎಂದು ರಮೇಶ್ ಟ್ವೀಟ್ ಮಾಡಿದ್ದಾರೆ.