Thursday, 12th December 2024

ಮಾ.9ರಂದು ತ್ರಿಪುರಾ ಸಿಎಂ ಪ್ರಮಾಣ ವಚನ

ಕೊಹಿಮಾ/ಶಿಲ್ಲಾಂಗ್/ಅಗರ್ತಲಾ: ತ್ರಿಪುರಾದಲ್ಲಿ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಬಿಜೆಪಿಯ ಮಾಣಿಕ್ ಸಹಾ ಅವರು ಗುರುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಮಾಣವಚನ ಸ್ವೀಕಾರ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿಯ (ಎನ್‌ಡಿಪಿಪಿ) ನೇಫಿಯು ರಿಯೊ ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿಯ (ಎನ್‌ಪಿಪಿ) ಕಾನ್ರಾಡ್ ಸಂಗ್ಮಾ ಕ್ರಮವಾಗಿ ನಾಗಾಲ್ಯಾಂಡ್ ಮತ್ತು ಮೇಘಾಲಯದ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಗಡಿ ರಾಜ್ಯ ನಾಗಾಲ್ಯಾಂಡ್‌ನಲ್ಲಿ ಶಾಂತಿ ಒಪ್ಪಂದವನ್ನು ಅಂತಿಮಗೊಳಿಸಲು ಎನ್‌ಎಸ್‌ಸಿಎನ್ (ಐಎಂ) ನ ಮಾಜಿ ಬಂಡುಕೋರರೊಂದಿಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸುತ್ತಿದೆ. ಇದರ ನಡುವೆ ಮುಖ್ಯಮಂತ್ರಿ ರಿಯೊ ಸರ್ಕಾರಕ್ಕೆ ವಿರೋಧ ಪಕ್ಷವಿಲ್ಲದೆ ಎಲ್ಲ ಪಕ್ಷಗಳು ಬೆಂಬಲ ನೀಡಿವೆ.

ಇತ್ತೀಚೆಗಷ್ಟೇ ನಡೆದ ನಾಗಾಲ್ಯಾಂಡ್ ಚುನಾವಣೆಯಲ್ಲಿ ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟ 60 ಸದಸ್ಯ ಬಲದ ವಿಧಾನಸಭೆಯಲ್ಲಿ 37 ಸ್ಥಾನಗಳನ್ನು ಗೆದ್ದುಕೊಂಡಿತ್ತು. ರಾಜ್ಯದ ಎಲ್ಲಾ ಇತರ ಪಕ್ಷಗಳು ರಿಯೊ ನೇತೃತ್ವದ ಮೈತ್ರಿಕೂಟಕ್ಕೆ ತಮ್ಮ ಬೆಂಬಲ ಸೂಚಿಸಿವೆ.

ಮೇಘಾಲಯದಲ್ಲಿ ಎನ್‌ಪಿಪಿ ನೇತೃತ್ವದ ಮೈತ್ರಿಕೂಟವು ಬಿಜೆಪಿಯ ಇಬ್ಬರು ಸೇರಿದಂತೆ 45 ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸಲು ಹಕ್ಕು ಮಂಡಿಸಿದೆ.

ಫೆಬ್ರವರಿ 27 ರಂದು ನಡೆದ ಚುನಾವಣೆಯಲ್ಲಿ 26 ಸ್ಥಾನಗಳನ್ನು ಗೆದ್ದಿರುವ ಎನ್‌ಪಿಪಿ ಮುಖ್ಯಸ್ಥ ಕಾನ್ರಾಡ್ ಕೆ ಸಂಗ್ಮಾ ಅವರು ಮಂಗಳವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.