ಈ ಭೇಟಿಗಳ ವೇಳೆ ಎರಡು ಬೃಹತ್ ಸಮಾವೇಶಗಳನ್ನು ಉದ್ದೇಶಿಸಿ ಭಾಷಣ ಮಾಡಲಿ ದ್ದಾರೆ. ಗೋಮತಿ ಜಿಲ್ಲೆಯ ಉದಯಪುರ ಉಪ ವಿಭಾಗದ ಆರ್.ಕೆ. ಪುರದಲ್ಲಿ ಮೊದಲ ಸಮಾವೇಶ ನಡೆಯಲಿದೆ. ಅದರಲ್ಲಿ ಭಾಗವಹಿಸಿದ ಬಳಿಕ ಅವರು ಧಲಾಯಿ ಜಿಲ್ಲೆಯ ಅಂಬಸ್ಸಾದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲ ಗಳು ತಿಳಿಸಿವೆ. ಉತ್ತರ ಜಿಲ್ಲೆಯ ಬಗ್ಬಸ್ಸಾದಲ್ಲಿ 13ರಂದು ಸಮಾವೇಶ ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ.
ಈ ಮಧ್ಯೆ, ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ತ್ರಿಪುರಾದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಬಿಜೆಪಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದು, ಅಧಿಕಾರಕ್ಕೆ ಬಂದರೆ ಮುಂದಿನ ಐದು ವರ್ಷಗಳಲ್ಲಿ ಇನ್ನಷ್ಟು ಕೊಡುಗೆಗಳನ್ನು ನೀಡಲಿದೆ ಎಂದು ಅವರು ಭರವಸೆ ನೀಡಿದ್ದಾರೆ.
ತ್ರಿಪುರಾ ವಿಧಾನಸಭೆ ಚುನಾವಣೆಗೆ ಪ್ರಣಾಳಿಕೆಯನ್ನು ಬಿಜೆಪಿ ಈಗಾಗಲೇ ಬಿಡುಗಡೆ ಮಾಡಿದ್ದು, ಬುಡಕಟ್ಟು ಜನರ ಕಲ್ಯಾಣ, ರೈತರಿಗೆ ಹೆಚ್ಚಿನ ಹಣಕಾಸು ನೆರವು ಸೇರಿದಂತೆ ಅನೇಕ ಭರವಸೆಗಳನ್ನು ನೀಡಿದೆ. ಚುನಾವಣಾ ಪ್ರಣಾಳಿಕೆಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಗುರುವಾರ ಬಿಡುಗಡೆ ಮಾಡಿದ್ದರು.
ಈ ಮಧ್ಯೆ, ಹಿಂದಿನ ಚುನಾವಣೆಯಲ್ಲಿ ಸೋತ 5 ಕ್ಷೇತ್ರಗಳೂ ಸೇರಿ ತ್ರಿಪುರಾದ 13 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ನಿರ್ಧರಿಸಿದೆ. 2018ರ ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ತ್ರಿಪುರಾದಲ್ಲಿ ಕಾಂಗ್ರೆಸ್ ತನ್ನ ಖಾತೆಯನ್ನು ತೆರೆಯಲು ಸಾಧ್ಯವಾಗಲಿಲ್ಲ, ಆದರೆ ಈ ಬಾರಿ ಈಶಾನ್ಯ ರಾಜ್ಯದಿಂದ ಪಕ್ಷವು ಹೆಚ್ಚಿನ ನಿರೀಕ್ಷೆಯನ್ನು ಹೊಂದಿದೆ.
ಫೆ.16 ರಂದು ತ್ರಿಪುರಾ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಮಾರ್ಚ್ 2ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.