ಅಮರಾವತಿ: ತಿರುಪತಿ ತಿಮ್ಮಪ್ಪನ (Tirupati Timmappa) ಭಕ್ತರು ಇನ್ನುಮಂದೆ ದೇವರ ದರ್ಶನಕ್ಕಾಗಿ ದೇವಸ್ಥಾನದಲ್ಲಿ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ. ಹೌದು, ಕೃತಕ ಬುದ್ಧಿಮತ್ತೆ (Artificial Intelligence) ಸೇರಿದಂತೆ ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡು ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದರ್ಶನದ ಸಮಯವನ್ನು 20-30 ಗಂಟೆಗಳಿಂದ ಕೇವಲ 2-3 ಗಂಟೆಗಳಿಗೆ ಇಳಿಸಲಾಗುವುದು ಎಂದು ತಿರುಮಲ ತಿರುಪತಿ ದೇವಸ್ಥಾನಂ (TTD) ಆಡಳಿತ ಮಂಡಳಿ ತಿಳಿಸಿದೆ. ಸೋಮವಾರ (ನ. 18) ಟಿಟಿಡಿ ಅಧ್ಯಕ್ಷ ಬಿ.ಆರ್.ನಾಯ್ಡು ಅವರ ನೇತೃತ್ವದಲ್ಲಿ ನಡೆದ ಮೊದಲ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ (TTD Meeting).
ದೇವಾಲಯದ ವ್ಯವಹಾರಗಳನ್ನು ನಿರ್ವಹಿಸುವ ಟಿಟಿಡಿ ಮಂಡಳಿಯು ಸಭೆಯಲ್ಲಿ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಕಂಪಾರ್ಟ್‌ಮೆಂಟ್‌ಗಳಲ್ಲಿ ಭಕ್ತರಿಗೆ ತೊಂದರೆ, ಕಿರಿಕಿರಿ ಉಂಟಾಗದಂತೆ ದರ್ಶನ ಲಭ್ಯವಾಗಲು ಈ ಯೋಜನೆ ರೂಪಿಸಲು ನಿರ್ಧರಿಸಲಾಗಿದೆ.
The newly formed #TTDevasthanams Board's maiden meeting under the Chairmanship of #BRNaidu at #Tirumala, #Tirupati on Monday, Nov 18.#TTDBoard decisions:
— Surya Reddy (@jsuryareddy) November 18, 2024
• #TTD will offer VRS to Non-Hindu staff or surrender them to AP govt
•No political statements in Tirumala and action… pic.twitter.com/Ph3St3x8EC
ಸಭೆಯ ಪ್ರಮುಖ ನಿರ್ಣಯಗಳು
ಟಿಟಿಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿಂದೂಯೇತರರನ್ನು ಬೇರೆಡೆಗೆ ವರ್ಗಾಯಿಸುವಂತೆ ಮಂಡಳಿಯು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಿದೆ. ಇತ್ತೀಚೆಗೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಿ.ಆರ್.ನಾಯ್ಡು ಅವರು ಟಿಟಿಡಿಯಲ್ಲಿ ಹಿಂದೂಗಳು ಮಾತ್ರ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದ್ದರು.
ಟಿಟಿಡಿಯ ಯಾವುದೇ ಸದಸ್ಯರು ಯಾವುದೇ ರಾಜಕೀಯ ಹೇಳಿಕೆಗಳನ್ನು ನೀಡದಂತೆಯೂ ಸೂಚಿಸಲಾಗಿದೆ. ʼʼಅಂತಹ ಹೇಳಿಕೆಗಳನ್ನು ನೀಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದುʼʼ ಎಂದು ಬಿ.ಆರ್.ನಾಯ್ಡು ಎಚ್ಚರಿಸಿದ್ದಾರೆ. ಎಸ್ಇಡಿ (Special Entry Darshan) ಟಿಕೆಟ್‌ಗಳ ಅಕ್ರಮಗಳಿಗೆ ಸಂಬಂಧಿಸಿದ ದೂರುಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ವಿವಿಧ ರಾಜ್ಯಗಳ ಪ್ರವಾಸೋದ್ಯಮ ನಿಗಮಗಳ ದರ್ಶನ ಕೋಟಾವನ್ನು ತೆಗೆದುಹಾಕಲು ಮಂಡಳಿಯು ಅನುಮೋದನೆ ನೀಡಿದೆ.
ದೇವರ ದುಡ್ಡನ್ನು ಖಾಸಗಿ ಬ್ಯಾಂಕ್ ಬದಲಿಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‍ಗಳಲ್ಲಿ ಜಮೆ ಮಾಡಲು ಟಿಟಿಡಿ ನಿರ್ಣಯಿಸಿದೆ. ಈ ಬಗ್ಗೆ ಮುಂದಿನ ಸಭೆಯಲ್ಲಿ ವಿಸ್ತ್ರತ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ.
ತಿರುಪತಿಯ ಲಡ್ಡು ಪ್ರಸಾದ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬಿನೊಂದಿಗೆ ಕಲಬೆರಕೆ ಮಾಡಿದ ತುಪ್ಪವನ್ನು ಬಳಸಲಾಗಿದೆ ಎಂಬ ಆರೋಪ ಇತ್ತೀಚೆಗೆ ಭಾರಿ ವಿವಾದ ಹುಟ್ಟು ಹಾಕಿತ್ತು. ಇದರಿಂದ ಎಚ್ಚೆತ್ತ ಟಿಟಿಡಿ, ಉತ್ತಮ ಗುಣಮಟ್ಟದ ತುಪ್ಪವನ್ನು ಬಳಸಲು ನಿರ್ಧರಿಸಿದೆ. ಶ್ರೀವಾಣಿ ಟ್ರಸ್ಟ್ ಅನ್ನು ಟಿಟಿಡಿಯೊಂದಿಗೆ ವಿಲೀನಗೊಳಿಸಲು ಮಂಡಳಿಯು ನಿರ್ಧರಿಸಿದೆ. ಸ್ಥಳೀಯರಿಗೆ ಪ್ರತಿ ತಿಂಗಳ ಮೊದಲ ಮಂಗಳವಾರ ದೇವರ ದರ್ಶನ ಕಲ್ಪಿಸಲು ತೀರ್ಮಾನ ತೆಗೆದುಕೊಂಡಿದೆ.
ಇತರ ಮುಖ್ಯ ನಿರ್ಣಯಗಳು
- ತಿರುಮಲದ ಪ್ರತಿದಿನ ವಿತರಿಸಲಾಗುವ ಅನ್ನಪ್ರಸಾದದಲ್ಲಿ ಇನ್ನೊಂದು ರುಚಿಕರ ಭಕ್ಷ್ಯ ಪರಿಚಯಿಸಲಾಗುತ್ತದೆ.
- ಶ್ರೀನಿವಾಸ ಸೇತು ಫ್ಲೈ ಓವರ್ ಹೆಸರನ್ನು ಗರುಡ ವರಧಿ ಎಂದು ಬದಲಾಯಿಸಲಾಗುತ್ತದೆ.
- ಶ್ರೀವಾರಿ ದೇವಾಲಯದ ಹಳೆಯ ಪೋಟು ದೇವಾಲಯದ ಅಡುಗೆಮನೆಯಲ್ಲಿನ ಸೋರಿಕೆಯ ದುರಸ್ತಿ ಕಾರ್ಯ ಮತ್ತು ವೆಂಗಮಾಂಬ ಅನ್ನಪ್ರಸಾದಂ ಕಾಂಪ್ಲೆಕ್ಸ್‌ನ ಆಧುನೀಕರಣವನ್ನು ಟಿವಿಎಸ್ ಕಂಪನಿ ಕೈಗೆತ್ತಿಕೊಳ್ಳಲಿದೆ.
- ಅಲಿಪಿರಿಯಲ್ಲಿ ಪ್ರವಾಸೋದ್ಯಮಕ್ಕೆ ನೀಡಲಾದ 20 ಎಕರೆ ಭೂಮಿಯನ್ನು ಹಸ್ತಾಂತರಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗುವುದು.
- ಈ ವರ್ಷದ ಅ. 4ರಿಂದ 13ರವರೆಗೆ ನಡೆದ ತಿರುಮಲ ಶ್ರೀವಾರಿ ದೇವಾಲಯದ ವಾರ್ಷಿಕ ಬ್ರಹ್ಮೋತ್ಸವದ ಸಂದರ್ಭದಲ್ಲಿ ವಿಶೇಷ ಸೇವೆ ಸಲ್ಲಿಸಿದ ನೌಕರರ ಗೌರವಧನದಲ್ಲಿ ಶೇ. 10ರಷ್ಟು ಹೆಚ್ಚಳಕ್ಕೆ ಟಿಟಿಡಿ ಮಂಡಳಿ ಅನುಮೋದನೆ ನೀಡಿದೆ.
ಈ ಸುದ್ದಿಯನ್ನೂ ಓದಿ: Tirupati temple: ತಿರುಪತಿ ಪ್ರತ್ಯೇಕ ರಾಜ್ಯ ಆಗಬೇಕಾ? ಸುಪ್ರೀಂ ಕೋರ್ಟ್ ಹೇಳಿದ್ದೇನು?