ಅರಿಶಿನವನ್ನು ಬಹಳ ಹಿಂದಿನ ಕಾಲದಿಂದಲೂ ಅಡುಗೆಯಲ್ಲಿ ಬಳಸುತ್ತ ಬಂದಿದ್ದಾರೆ. ಯಾಕೆಂದರೆ ಇದರಲ್ಲಿ ಔಷಧೀಯ ಗುಣಗಳಿರುವ ಕಾರಣ ಇದು ಆಹಾರದಲ್ಲಿರುವ ದೇಹಕ್ಕೆ ಹಾನಿಯುಂಟುಮಾಡುವಂತಹ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ. ಅಲ್ಲದೇ ಇದು ಅಡುಗೆಯ ಪರಿಮಳವನ್ನು ಹೆಚ್ಚಿಸುತ್ತದೆ. ಹಾಗಾಗಿ ಎಲ್ಲರ ಅಡುಗೆ ಮನೆಯಲ್ಲಿ ಅರಿಶಿನ (Turmaric Water) ಕಂಡುಬರುತ್ತದೆ. ಆದರೆ ಇದನ್ನು ಅಡುಗೆಗೆ ಮಾತ್ರವಲ್ಲ ಮನೆಮದ್ದುಗಳಲ್ಲಿ ಕೂಡ ಬಳಸುತ್ತಾರೆ. ಅರಿಶಿನವು ಕರ್ಕ್ಯುಮಿನ್ ಅನ್ನು ಹೊಂದಿದೆ, ಇದು ದೇಹಕ್ಕೆ ಹಲವು ಪ್ರಯೋಜನವನ್ನು ನೀಡುತ್ತದೆ. ಆದ್ದರಿಂದ ನಿಮ್ಮ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸಲು ನೀವು ನೈಸರ್ಗಿಕ ಪರಿಹಾರವನ್ನು ಬಯಸಿದರೆ ನೀವು ಬೆಳಿಗ್ಗೆ ಅರಿಶಿನ ನೀರನ್ನು ಸೇವಿಸಬೇಕು. ಮತ್ತು ಇದರಿಂದ ಏನೆಲ್ಲಾ ಪ್ರಯೋಜನವಿದೆ ಎಂಬುದನ್ನು ತಿಳಿಯಿರಿ.
ಉರಿಯೂತ ನಿವಾರಣೆ
ದೇಹದಲ್ಲಿ ಗಾಯ ಅಥವಾ ಸೋಂಕು ಉಂಟಾದ ಉರಿಯೂತ ಕಂಡುಬರುತ್ತದೆ. ಆದರೆ ದೀರ್ಘಕಾಲದ ಉರಿಯೂತವು ಸಂಧಿವಾತ, ಹೃದ್ರೋಗ ಮತ್ತು ಮಧುಮೇಹದಂತಹ ಕಾಯಿಲೆಗಳಿಗೆ ಕಾರಣವಾಗಬಹುದು. ಅರಿಶಿನದಲ್ಲಿರುವ ಕರ್ಕ್ಯುಮಿನ್ ಪ್ರಬಲ ಉರಿಯೂತ ನಿವಾರಕವಾಗಿದ್ದು, ಇದು ದೀರ್ಘಕಾಲದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಅರಿಶಿನವು ಆ್ಯಂಟಿಆಕ್ಸಿಡೆಂಟ್ಗಳನ್ನು ಹೊಂದಿದೆ. ಇದು ಫ್ರೀ ರಾಡಿಕಲ್ಗಳಿಂದ ಉಂಟಾಗುವ ಜೀವಕೋಶಗಳ ಹಾನಿ ಮತ್ತು ರೋಗನಿರೋಧಕ ಶಕ್ತಿ ದುರ್ಬಲಗೊಳುವುದನ್ನು ತಡೆಯುತ್ತದೆ. ಇದರಿಂದ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆ ಉತ್ತಮವಾಗಿ, ನೀವು ಶೀತ, ಜ್ವರದಂತಹ ಕಾಯಿಲೆಗಳು ಬರದಂತೆ ಹೋರಾಡಬಹುದು.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ
ಅರಿಶಿನ ನೀರನ್ನು ಕುಡಿಯುವುದರಿಂದಾಗುವ ಮತ್ತೊಂದು ಪ್ರಯೋಜನವೆಂದರೆ ಜೀರ್ಣಕ್ರಿಯೆ ಸಾಮರ್ಥ್ಯ ಹೆಚ್ಚಾಗುತ್ತದೆ. ಇದರಿಂದ ಹೊಟ್ಟೆ ಉಬ್ಬರ, ಗ್ಯಾಸ್ ಮತ್ತು ಅಜೀರ್ಣದಂತಹ ಜೀರ್ಣಕಾರಿ ಸಮಸ್ಯೆಗಳು ನಿವಾರಣೆಯಾಗುತ್ತವೆ. ಕರುಳಿನ ಸಿಂಡ್ರೋಮ್ (ಐಬಿಎಸ್) ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಅರಿಶಿನದಲ್ಲಿರುವ ಕರ್ಕ್ಯುಮಿನ್ ಅಂಶ ಸಹಾಯ ಮಾಡುತ್ತದೆ.
ಡಿಟಾಕ್ಸಿಂಗ್ ಮಾಡಲು ಸಹಾಯ ಮಾಡುತ್ತದೆ
ಬೆಳಿಗ್ಗೆ ಬೆಚ್ಚಗಿನ ಅರಿಶಿನ ನೀರನ್ನು ಕುಡಿಯುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರಹಾಕುವ ಮೂಲಕ ದೇಹವನ್ನು ಡಿಟಾಕ್ಸಿಂಗ್ ಮಾಡಲು ಸಹಾಯ ಮಾಡುತ್ತದೆ. ಅಧ್ಯಯನದ ಪ್ರಕಾರ, ಕರ್ಕ್ಯುಮಿನ್ ಜೀವಾಣುಗಳಿಂದ ಉಂಟಾಗುವ ಹಾನಿಯಿಂದ ಯಕೃತ್ತಿನ ಕೋಶಗಳನ್ನು ರಕ್ಷಿಸುತ್ತದೆ ಮತ್ತು ಒಟ್ಟಾರೆ ಯಕೃತ್ತಿನ ಕಾರ್ಯವನ್ನು ಸುಧಾರಿಸುತ್ತದೆ ಎನ್ನಲಾಗಿದೆ.
ತೂಕ ನಷ್ಟಕ್ಕೆ ಸಹಕಾರಿಯಾಗಿದೆ
ಕರ್ಕ್ಯುಮಿನ್ ಕೊಬ್ಬಿನ ಅಂಗಾಂಶ ಬೆಳೆಯುವುದನ್ನು ತಡೆಯುತ್ತದೆ. ಇದು ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಪ್ರಯೋಜನಕಾರಿಯಾಗಿದೆ. ಚಯಾಪಚಯವನ್ನು ನಿಯಂತ್ರಿಸುವ ಮೂಲಕ ಕರ್ಕ್ಯುಮಿನ್ ದೇಹದ ಕೊಬ್ಬಿನ ಅಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ
ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ
ಪ್ರತಿದಿನ ಬೆಳಿಗ್ಗೆ ಅರಿಶಿನ ನೀರನ್ನು ಕುಡಿಯುವುದರಿಂದ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಅಲ್ಲದೇ ಮೊಡವೆ ಮತ್ತು ಕಲೆಗಳನ್ನು ಕಡಿಮೆ ಮಾಡಿ ಚರ್ಮದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಅರಿಶಿನವನ್ನು ಬಹಳ ಹಿಂದಿನ ಕಾಲದಿಂದಲೂ ಚರ್ಮದ ಆರೈಕೆಯಲ್ಲಿ ಬಳಸಲಾಗುತ್ತದೆ.
ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ
ಮಧುಮೇಹದಿಂದ ಬಳಲುತ್ತಿರುವವರಿಗೆ ಅರಿಶಿನ ನೀರು ಉತ್ತಮ ಮನೆಮದ್ದಾಗಿದೆ. ಯಾಕೆಂದರೆ ಕರ್ಕ್ಯುಮಿನ್ ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಕಮಲದ ಹೂವಿನ ದಂಟನ್ನು ಸೇವಿಸಿದರೆ ಸಾಕು; ಹಲವು ಆರೋಗ್ಯ ಸಮಸ್ಯೆಗಳು ಮಾಯ!
ಬೆಳಗ್ಗೆ ಅರಿಶಿನ ನೀರನ್ನು ಕುಡಿಯುವುದು ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸರಳ ಮತ್ತು ನೈಸರ್ಗಿಕ ಮಾರ್ಗವಾಗಿದೆ.