ಜೈಪುರ: ರಾಜಸ್ಥಾನದ ಬಿಕಾನೇರ್‌ನ ಮಹಾಜನ್ ಫೀಲ್ಡ್ ಫೈರಿಂಗ್ ರೇಂಜ್ (Bikaner’s Mahajan field firing range)ನಲ್ಲಿ ಬುಧವಾರ (ಡಿ. 18) ತರಬೇತಿ ಅಭ್ಯಾಸದ ವೇಳೆ ಟ್ಯಾಂಕ್‌ಗೆ ಮದ್ದುಗುಂಡುಗಳನ್ನು ತುಂಬುವಾಗ ಸಂಭವಿಸಿದ ಸ್ಫೋಟದಲ್ಲಿ ಭಾರತೀಯ ಸೇನೆಯ ಇಬ್ಬರು ಯೋಧರು ಮೃತಪಟ್ಟಿದ್ದಾರೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. ಘಟನೆಯಲ್ಲಿ ಒಬ್ಬರು ಗಾಯಗೊಂಡಿದ್ದಾರೆ.
ʼʼಇಬ್ಬರು ಸೈನಿಕರು ಸ್ಥಳದಲ್ಲೇ ಮೃತಪಟ್ಟರೆ ಒಬ್ಬರ ಸ್ಥಿತಿ ಗಂಭೀರವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೈನಿಕರ ಮೃತದೇಹವನ್ನು ಸೂರತ್ ಘರ್‌ನ ಮಿಲಿಟರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಮದ್ದುಗುಂಡುಗಳನ್ನು ಲೋಡ್ ಮಾಡುವಾಗ ಚಾರ್ಜರ್ ಸ್ಫೋಟಗೊಂಡಿದೆʼʼ ಎಂದು ಭಾರತೀಯ ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಅಮಿತಾಭ್ ಶರ್ಮಾ ಹೇಳಿದ್ದಾರೆ.
Two soldiers were killed and one injured in Bikaner's Mahajan field firing range while loading ammunition in a tank during a training exercise on Wednesday.#Rajasthan pic.twitter.com/Fjuf6AwHUT
— The Tatva (@thetatvaindia) December 18, 2024
ತರಬೇತಿ ಸಮಯದಲ್ಲಿ ಹಠಾತ್ ಸ್ಫೋಟದ ಶಬ್ದ ಕೇಳಿದಾಗ ಅಪಘಾತ ಬೆಳಕಿಗೆ ಬಂದಿದೆ. ಸಿಒ ನರೇಂದ್ರ ಪೂನಿಯಾ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಮದ್ದುಗುಂಡುಗಳನ್ನು ಲೋಡ್ ಮಾಡುವ ಸಮಯದಲ್ಲಿ ಚಾರ್ಜರ್ ಸ್ಫೋಟಗೊಂಡು ಅವಘಡ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಮೂವರು ಸೈನಿಕರು ಟ್ಯಾಂಕ್‌ನಲ್ಲಿ ತರಬೇತಿ ಪಡೆಯುತ್ತಿದ್ದರು. ಸ್ಫೋಟದಲ್ಲಿ ಅಶುತೋಷ್ ಮಿಶ್ರಾ ಮತ್ತು ಜಿತೇಂದ್ರ ಮೃತಪಟ್ಟಿದ್ದಾರೆ. ಗಾಯಗೊಂಡ ಸೈನಿಕನನ್ನು ಹೆಲಿಕಾಪ್ಟರ್ ಮೂಲಕ ಚಂಡೀಗಢಕ್ಕೆ ಕರೆದೊಯ್ಯಲಾಗಿದೆʼʼ ಎಂದು ನರೇಂದ್ರ ಕುಮಾರ್ ಪೂನಿಯಾ ವಿವರಿಸಿದ್ದಾರೆ. ಅಶುತೋಷ್ ಮಿಶ್ರಾ ಉತ್ತರ ಪ್ರದೇಶದ ಡಿಯೋರಿಯಾ ಮೂಲದವರಾಗಿದ್ದರೆ, ಜಿತೇಂದ್ರ ರಾಜಸ್ಥಾನದ ದೌಸಾದವರು. ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ವಾರದಲ್ಲಿ 2ನೇ ಘಟನೆ
ಇದು ಬಿಕಾನೇರ್‌ನ ಮಹಾಜನ್ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿ ವಾರದ ಅಂತರದಲ್ಲಿ ಸಂಭವಿಸಿದ ಎರಡನೇ ಪ್ರಕರಣ ಎನಿಸಿಕೊಂಡಿದೆ. ಡಿ. 15ರಂದು 199ನೇ ಮಧ್ಯಮ ರೆಜಿಮೆಂಟ್‌ನ ಹವಿಲ್ದಾರ್ (ಗನ್ನರ್) ಚಂದ್ರ ಪ್ರಕಾಶ್ ಪಟೇಲ್ ಅವರು ತರಬೇತಿ ಸಮಯದಲ್ಲಿ ಬಂದೂಕು ವಾಹನವನ್ನು ಎಳೆಯುವಾಗ ಮೃತಪಟ್ಟಿದ್ದರು. ವಾಹನ ಹಿಂದಕ್ಕೆ ಜಾರಿದ್ದರಿಂದ ಅವಘಡ ಸಂಭವಿಸಿತ್ತು.
ಈ ಸುದ್ದಿಯನ್ನ ಓದಿ: Soldier Dies: ಲಡಾಖ್ನಲ್ಲಿ ಗುಡ್ಡ ಕುಸಿದು ಬೆಳಗಾವಿ ಮೂಲದ ಯೋಧ ಸಾವು