Thursday, 12th December 2024

ಸ್ವತಂತ್ರ ಅಭ್ಯರ್ಥಿ ಉತ್ಪಲ್ ಪರಿಕ್ಕರ್ ನಾಮಪತ್ರ ಸಲ್ಲಿಕೆ ಇಂದು

ಪಣಜಿ: ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಪುತ್ರ ಉತ್ಪಲ್ ಪರಿಕ್ಕರ್ ಸ್ವತಂತ್ರ ಅಭ್ಯರ್ಥಿಯಾಗಿ ಪಣಜಿಯಲ್ಲಿ ಗುರುವಾರ ನಾಮಪತ್ರ ಸಲ್ಲಿಸಲಿದ್ದಾರೆ.

ಗೋವಾ ಚುನಾವಣೆಗೆ ಸ್ಪರ್ಧಿಸುವ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ ಇದೀಗ ಪರಿಕ್ಕರ್ ಕುಟುಂಬದ ತಲೆನೋವು ಎದುರಿಸುತ್ತಿದೆ. ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಅಸಮಾಧಾನ ತೋಡಿ ಕೊಂಡ ಗೋವಾ ಮಾಜಿ ಸಿಎಂ ಮನೋಹರ್ ಪರಿಕ್ಕರ್ ಪುತ್ರ ಉತ್ಪಲ್ ಪರಿಕ್ಕರ್ ಬಿಜೆಪಿಗೆ ಗುಡ್‌ಬೈ ಹೇಳಿದ್ದಾರೆ.

ಗೋವಾ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಪಣಜಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಉತ್ಪಲ್ ಘೋಷಿಸಿದ್ದಾರೆ.

ಮನೋಹರ್ ಪರಿಕ್ಕರ್ ನಿಧನದ ಬಳಿಕ ಉತ್ಪಲ್ ಪರಿಕ್ಕರ್ ಗೋವಾ ಬಿಜೆಪಿಯಲ್ಲಿ ತಮ್ಮ ಸ್ಥಾನ ಗಟ್ಟಿಮಾಡಿಕೊಳ್ಳಲು ಯತ್ನಿಸಿದ್ದರು. ಇದೇ ವೇಳೆ ಪರಿಕ್ಕರ್ ಕುಟುಂಬ ಹಾಗೂ ಬಿಜೆಪಿ ನಡುವೆ ತಿಕ್ಕಾಟ ನಡೆಯುತ್ತಲೇ ಬಂದಿತ್ತು.

ಬಿಜೆಪಿ ಹೈಕಮಾಂಡ್ ಗೋವಾ ಚುನಾವಣೆ ಅಖಾಡಕ್ಕೆ 34 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಉತ್ಪಲ್ ಪರಿಕ್ಕರ್ ಹೆಸರು ಕೈಬಿಡಲಾಗಿತ್ತು. ಇದು ಉತ್ಪಾಲ್ ಪರಿಕ್ಕರ್ ಅಸಮಾಧಾನಕ್ಕೆ ಕಾರಣವಾಗಿತ್ತು. ಬಹಿರಂಗ ವಾಗಿ ಅಸಮಾಧಾನ ತೋಡಿಕೊಂಡ ಉತ್ಪಾಲ್ ಪರಿಕ್ಕರ್ ಟಿಕೆಟ್‌ಗಾಗಿ ಪ್ರತಿಭಟನೆ ಆರಂಭಿಸಿದ್ದರು.

ಅನಾರೋಗ್ಯದಿಂದ ನಿಧನರಾಗಿರುವ ಮನೋಹರ್ ಪರಿಕ್ಕರ್ 25 ವರ್ಷಗಳಿಂದ ಪಣಜಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.

ಉತ್ಪಲ್ ಪರಿಕ್ಕರ್ ಪಣಜಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಆದರೆ ಹಾಲಿ ಎಂಎಲ್‌ಎ ಈಗಾಗಲೇ ಈ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿರುವುದರಿಂದ ಅವರನ್ನು ಕೈಬಿಟ್ಟು ಉತ್ಪಲ್‌ಗೆ ಟಿಕೆಟ್ ನೀಡುವುದು ಸರಿಯಲ್ಲ. ಉತ್ಪಾಲ್‌ ಗೆ ಬೇರೆ ಎರಡು ಕ್ಷೇತ್ರ ಸೂಚಿಸಲಾಗಿದೆ ಎಂದು ಗೋವಾ ಚುನಾವಣೆ ಬಿಜೆಪಿ ಉಸ್ತುವಾರಿ ನಾಯಕ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.

ಪಣಜಿ ಕ್ಷೇತ್ರದಿಂದ ಉತ್ಪಾಲ್ ಪರಿಕ್ಕರ್‌ಗೆ ಆಮ್ ಆದ್ಮಿ ಪಾರ್ಟಿ ಟಿಕೆಟ್ ನೀಡುವುದಾಗಿ ಸ್ವತಃ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.

ಇತರ ಪಕ್ಷಗಳಿಂದ ಭಾರಿ ಬೆಂಬಲ ಪಡೆದಿರುವ ಉತ್ಪಾಲ್ ಪರಿಕ್ಕರ್ ಇದೀಗ ಎಲ್ಲಾ ಉಹೆಗಳನ್ನು ತಲೆಕೆಳಗಾಗಿ ಮಾಡಿದ್ದಾರೆ.