Saturday, 23rd November 2024

ಯುಎಇಗೆ ತೆರಳಲು ಡಿಕೆಶಿಗೆ ಗ್ರೀನ್‌ ಸಿಗ್ನಲ್‌

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿನ ಮೇಲೆ ಹೊರಗಿರುವ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರಿಗೆ ಕಾರ್ಯಕ್ರಮ ವೊಂದರಲ್ಲಿ ಭಾಗವಹಿಸುವ ಸಲುವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ತೆರಳಲು ದೆಹಲಿ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ.

ಶಿವಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಗಳಾದ ಆಶಾ ಮೆನನ್, ‘ಅರ್ಜಿದಾರರಿಗೆ ಮಾ. 31 ರಿಂದ ಏ. 6 ರ ನಡುವೆ ದುಬೈ ಮತ್ತು ಅಬುಧಾಬಿಗೆ ಪ್ರಯಾಣಿಸಲು ಅವಕಾಶವಿದೆ. ಅಲ್ಲಿಂದ ಹಿಂದಿರುಗಿದ ವಿಚಾರ ವನ್ನು ತನಿಖಾಧಿಕಾರಿಗೆ ತಿಳಿಸುತ್ತಾರೆ’ ಎಂದು ಹೇಳಿದ್ದಾರೆ.

ಶಿವಕುಮಾರ್ ಅವರನ್ನು ಪ್ರತಿನಿಧಿಸಿದ್ದ ವಕೀಲ ಮಯಾಂಕ್ ಜೈನ್, ದುಬೈನಲ್ಲಿ ವಿಶೇಷ ಅತಿಥಿಯಾಗಿರುವ ಕಾರ್ಯಕ್ರಮಕ್ಕೆ ಶಿವಕುಮಾರ್ ಅವರ ಉಪಸ್ಥಿತಿಯ ಅಗತ್ಯವಿದೆ ಎಂದು ಹೇಳಿದ್ದರು.

2019ರ ಅಕ್ಟೋಬರ್‌ನಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿದ್ದ ಶಿವಕುಮಾರ್‌ಗೆ ಜಾಮೀನು ಮಂಜೂರು ಮಾಡಿದ್ದ ಹೈಕೋರ್ಟ್‌, ನ್ಯಾಯಾಲಯದ ಅನುಮತಿಯಿಲ್ಲದೆ ದೇಶ ತೊರೆಯು ವಂತಿಲ್ಲ ಎಂಬ ಷರತ್ತು ವಿಧಿಸಿತ್ತು.

ತೆರಿಗೆ ವಂಚನೆ ಮತ್ತು ಕೋಟಿ ರೂಪಾಯಿ ಮೌಲ್ಯದ ‘ಹವಾಲಾ’ ವಹಿವಾಟಿನ ಆರೋಪದ ಮೇಲೆ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಕಳೆದ ವರ್ಷ ಆದಾಯ ತೆರಿಗೆ ಇಲಾಖೆ ಸಲ್ಲಿಸಿದ್ದ ಚಾರ್ಜ್ ಶೀಟ್ ಆಧರಿಸಿ ಪ್ರಕರಣ ದಾಖಲಿಸಲಾಗಿದೆ.