Thursday, 12th December 2024

ಯುಸಿಸಿ ಜಾರಿ ವಿರುದ್ದ ಕೇರಳ ವಿಧಾನಸಭೆಯಲ್ಲಿ ಅಂಗೀಕಾರ

ತಿರುವನಂತಪುರಂ: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು(ಯುಸಿಸಿ) ಜಾರಿಗೊಳಿಸದಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಕೇರಳ ವಿಧಾನಸಭೆ ಮಂಗಳವಾರ ಸರ್ವಾನುಮತದಿಂದ ಅಂಗೀಕರಿಸಿದೆ.

ಫೆಬ್ರವರಿಯಲ್ಲಿ ಮಿಜೋರಾಂ ವಿಧಾನಸಭೆಯು ಯುಸಿಸಿಯನ್ನು ದೇಶದಲ್ಲಿ ಜಾರಿಗೊಳಿಸುವ ಪ್ರತಿಯೊಂದು ಕ್ರಮವನ್ನು ವಿರೋಧಿಸುವ ಅಧಿಕೃತ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿತು. ಇದೀಗ ಕೇರಳ ಸಹ ಇದನ್ನು ವಿರೋಧಿಸಿ ನಿರ್ಣಯ ಅಂಗೀಕರಿಸಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ರಾಜ್ಯ ವಿಧಾನಸಭೆಯಲ್ಲಿ ಯುಸಿಸಿ ವಿರುದ್ಧ ನಿರ್ಣಯವನ್ನು ಮಂಡಿಸಿದರು. ಇದು ಕೇಂದ್ರದ ‘ಏಕಪಕ್ಷೀಯ ಮತ್ತು ಆತುರದ’ ಕ್ರಮ ಎಂದು ಕರೆದಿದ್ದಾರೆ.

ಸಂಘಪರಿವಾರದ ಯುಸಿಸಿಯು ಸಂವಿಧಾನಕ್ಕೆ ಅನುಗುಣವಾಗಿಲ್ಲ. ಆದರೆ ಇದು ಹಿಂದೂ ಧರ್ಮಗ್ರಂಥ ‘ಮನುಸ್ಮೃತಿ’ಯನ್ನು ಆಧರಿಸಿದೆ ಎಂದು ವಿಜಯನ್ ಹೇಳಿದರು. ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರವು ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ವಿಚ್ಛೇದನ ಕಾನೂನುಗಳನ್ನು ಅಪರಾಧೀಕರಿಸಿದೆ. ಆದರೆ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಥವಾ ಅಂಚಿನಲ್ಲಿರುವವರ ಕಲ್ಯಾಣಕ್ಕಾಗಿ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ ಎಂದು ವಿಜಯನ್ ಹೇಳಿದರು.

ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷ ಯುಡಿಎಫ್ (ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್) ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಸ್ವಾಗತಿಸಿದೆ.

ಭಾರತದಲ್ಲಿ UCC ಯನ್ನು ಜಾರಿಗೊಳಿಸುವ ಸಲಹೆಗಳ ಬಗ್ಗೆ ಕಳೆದ ತಿಂಗಳು ಭಾರತೀಯ ಕಾನೂನು ಆಯೋಗವು ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಸ್ವೀಕರಿಸಿತ್ತು.