Friday, 22nd November 2024

Udhayanidhi Stalin: ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ; ಕ್ಷಮೆ ಕೇಳಲ್ಲ ಎಂದ ಉದಯನಿಧಿ ಸ್ಟಾಲಿನ್

Bomb threat

ಚೆನ್ನೈ: ಸನಾತನ ಧರ್ಮ (Sanatan Dharma)ವನ್ನು ಡೆಂಗ್ಯೂ ಕಾಯಿಲೆಗೆ ಹೋಲಿಸಿ ಅದರ ನಿರ್ಮೂಲನೆ ಮಾಡಬೇಕು ಎಂದು ಕರೆ ನೀಡಿದ್ದ ತಮಿಳುನಾಡಿನ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ (Udhayanidhi Stalin) ಯಾವುದೇ ಕಾರಣಕ್ಕೂ ಈ ಹೇಳಿಕೆಗೆ ಕ್ಷಮೆ ಕೋರುವುದಿಲ್ಲ ಎಂದು ಹೇಳಿದ್ದಾರೆ. ಸೋಮವಾರ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದ್ದಾರೆ.

”ನಾನು ಕಲೈನಾರ್ ಮೊಮ್ಮಗ. ಯಾವುದೇ ಕಾರಣಕ್ಕೂ ಸನಾತನ ಕುರಿತಾದ ಹೇಳಿಕೆಗೆ ಕ್ಷಮೆ ಕೋರುವುದಿಲ್ಲ. ಪೆರಿಯಾರ್, ಮಾಜಿ ಮುಖ್ಯಮಂತ್ರಿ ಸಿಎನ್ ಅಣ್ಣಾದೊರೈ ಮತ್ತು ಎಂ.ಕರುಣಾನಿಧಿ ಅವರಂತಹ ದ್ರಾವಿಡ ನಾಯಕರ ದೃಷ್ಟಿಕೋನವನ್ನು ತಾವು ಪ್ರತಿಧ್ವನಿಸಿದ್ದೇನೆʼʼ ಎಂದು ಹೇಳಿದ್ದಾರೆ. ತಮ್ಮ ಹೇಳಿಕೆಯು ಮಹಿಳೆಯರ ಮೇಲಿನ ಶೋಷಣೆಯನ್ನು ನಿವಾರಣೆ ಮಾಡುವ ಉದ್ದೇಶ ಹೊಂದಿದೆ. ಆದರೆ ತಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ಈ ಮೂಲಕ ಅದರ ಕುರಿತು ವಿವಾದ ಸೃಷ್ಟಿಸಲಾಗಿದೆ ಎಂದೂ ಸಮರ್ಥಿಸಿಕೊಂಡಿದ್ದಾರೆ.

“ಈ ಹಿಂದೆ ಮಹಿಳೆಯರಿಗೆ ಅಧ್ಯಯನ ಮಾಡಲು ಅವಕಾಶ ನೀಡುತ್ತಿರಲಿಲ್ಲ. ಅವರು ಮನೆಯಿಂದ ಹೊರಗೆ ಹೋಗುವುದು ಸಾಧ್ಯವಿರಲಿಲ್ಲ. ಗಂಡ ಸತ್ತರೆ ಅವರೂ ಕೂಡ ಸಾಯಬೇಕಾದ ಸನ್ನಿವೇಶ ಇತ್ತು. ತಂಥೈ ಪೆರಿಯಾರ್ ಇವೆಲ್ಲದರ ವಿರುದ್ಧ ಧ್ವನಿ ಎತ್ತಿದರು. ಪೆರಿಯಾರ್, ಅಣ್ಣಾದೊರೈ ಮತ್ತು ಕಲೈನಾರ್ ಏನು ಹೇಳಿದ್ದರೋ ಅದನ್ನು ನಾನು ಹೇಳಿದ್ದೇನೆ” ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.

ಏನಿದು ವಿವಾದ?

2023ರ ಸೆ. 4ರಂದು ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಉದಯನಿಧಿ ಸ್ಟಾಲಿನ್‌ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಪ್ರಗತಿಪರ ಲೇಖಕರು, ಕಲಾವಿದರ ಸಂಘದಿಂದ ಆಯೋಜಿಸಿದ್ದ ʼಸನಾತನ ನಿರ್ಮೂಲನಾ ಸಮಾವೇಶʼದಲ್ಲಿ ಮಾತನಾಡಿದ್ದ ಅವರು, “ ಸನಾತನ ಧರ್ಮ ಕೊರೊನಾ, ಡೆಂಗ್ಯೂ, ಮಲೇರಿಯಾ ಇದ್ದಂತೆ. ಇಂತಹ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ನೀವು ʼಸನಾತನ ವಿರೋಧಿ ಸಮ್ಮೇಳನʼ ಎಂಬುದಾಗಿ ಆಯೋಜಿಸುವ ಬದಲು ʼಸನಾತನ ನಿರ್ಮೂಲನಾ ಸಮ್ಮೇಳನʼ ಎಂದು ಕಾರ್ಯಕ್ರಮ ಆಯೋಜಿಸಿದ್ದು ನನಗೆ ಇಷ್ಟವಾಯಿತು” ಎಂದು ಹೇಳಿದ್ದರು. ಉದಯನಿಧಿ ಸ್ಟಾಲಿನ್‌ ಅವರ ಈ ಹೇಳಿಕೆ ಬಳಿಕ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಪರ-ವಿರೋಧ ಚರ್ಚೆಗಳು ಆರಂಭವಾಗಿದ್ದವು. ಮುಖ್ಯವಾಗಿ ಬಿಜೆಪಿ, ಹಿಂದೂಪರ ಸಂಘಟನೆಗಳು ಇದರ ವಿರುದ್ದ ಧ್ವನಿ ಎತ್ತಿದವು. ಈ ವಿವಾದ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

ಈ ಬಗ್ಗೆ ಮಾತನಾಡಿದ ಉದಯನಿಧಿ, ʼʼನನ್ನ ಮಾತುಗಳನ್ನು ತಿರುಚಲಾಗಿದೆ. ತಮಿಳುನಾಡು ಮಾತ್ರವಲ್ಲದೆ, ಭಾರತದ ಉದ್ದಕ್ಕೂ ಅನೇಕ ನ್ಯಾಯಾಲಯಗಳಲ್ಲಿ ನನ್ನ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಕ್ಷಮೆ ಕೋರುವಂತೆ ನನ್ನ ಮೇಲೆ ಒತ್ತಡ ಹೇರಲಾಗುತ್ತಿದೆ. ಆದರೆ ನಾನು ಹೇಳಿಕೆ ಬದ್ಧವಾಗಿದ್ದೇನೆ. ನಾನು ಕಲೈನಾರ್‌ನ ಮೊಮ್ಮಗ, ಎಂದಿಗೂ ಕ್ಷಮೆ ಕೋರುವುದಿಲ್ಲ” ಎಂದಿದ್ದಾರೆ.

ರಾಜ್ಯ ಗೀತೆಯಲ್ಲಿ ಇತ್ತೀಚೆಗೆ ಮಾಡಿದ ಬದಲಾವಣೆಗಳನ್ನು ಉಲ್ಲೇಖಿಸಿ ತಮಿಳುನಾಡಿನಲ್ಲಿ ಹಿಂದಿಯನ್ನು ಹೇರುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ತಮ್ಮ ವಿರುದ್ಧದ ಎಲ್ಲ ಪ್ರಕರಣಗಳನ್ನು ಎದುರಿಸುವುದಾಗಿ ಘೋಷಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Udhayanidhi Stalin: ಮಕ್ಕಳಿಗೆ ತಮಿಳು ಹೆಸರೇ ಇಡಿ, ಹಿಂದಿ ಹೇರಿಕೆ ವಿರುದ್ಧ ಹೋರಾಡಿ; ಉದಯನಿಧಿ ಸ್ಟಾಲಿನ್