Thursday, 12th December 2024

ಉಜ್ವಲ ಯೋಜನೆ 2.0ಕ್ಕೆ ನಾಳೆ ಚಾಲನೆ

ನವದೆಹಲಿ : ಕೇಂದ್ರದ ಸರ್ಕಾರವು ಉಜ್ವಲ ಯೋಜನೆಯನ್ನು ಹೊಸ ಪ್ಯಾಕೇಜಿಂಗ್‌ ನೊಂದಿಗೆ ಆರಂಭಿಸಲಿದ್ದು, ಆಗಸ್ಟ್ 10ರಂದು ಉಜ್ವಲ ಯೋಜನೆ 2.0ಕ್ಕೆ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಿಂದ ಚಾಲನೆ ನೀಡಲಾಗು ವುದು.

ಉಜ್ವಲ 2.0 ಅಡಿಯಲ್ಲಿ, ಫಲಾನುಭವಿಗೆ ಉಚಿತ ಗ್ಯಾಸ್ ಸಂಪರ್ಕ, ಗ್ಯಾಸ್ ಸ್ಟೋವ್ ಜೊತೆಗೆ ಮೊದಲ ಬಾರಿಗೆ ತುಂಬಿದ ಸಿಲಿಂಡರ್ ಸಿಗಲಿದೆ.

ಯೋಜನೆಯ ಮೊದಲ ಆವೃತ್ತಿಯಲ್ಲಿ, ಸರ್ಕಾರವು ಎಲ್ಪಿಜಿ ಸಂಪರ್ಕಗಳಿಗೆ ರೂ. 1600 (ಠೇವಣಿ ಹಣ) ದ ಆರ್ಥಿಕ ಸಹಾಯ ಮಾತ್ರ ನೀಡುತ್ತಿತ್ತು. ಈ ಯೋಜನೆ ಯಡಿ, ಗ್ಯಾಸ್ ಸಂಪರ್ಕಗಳನ್ನು ಪಡೆಯುವ ಕುಟುಂಬಗಳು ಯಾವುದೇ ಬಡ್ಡಿ ಇಲ್ಲದೆ ಸ್ಟೌವ್ ಮತ್ತು ಸಿಲಿಂಡರ್‌ ಗಳಿಗಾಗಿ ಸಾಲ ತೆಗೆದುಕೊಳ್ಳಬಹುದಾಗಿತ್ತು.

ಉಜ್ವಲ 2.0 ಯೋಜನೆಯ ಅಡಿ ಕೇಂದ್ರ ಸರ್ಕಾರ ಈ ಆರ್ಥಿಕ ವರ್ಷದಲ್ಲಿ ಸುಮಾರು ಒಂದು ಕೋಟಿ ಗ್ಯಾಸ್ ಸಂಪರ್ಕ ಬಡವರಿಗೆ ಉಚಿತವಾಗಿ ಕಲ್ಪಿಸುವ ಗುರಿ ಹೊಂದಿದೆ. ಸುಮಾರು ಐದು ವರ್ಷಗಳ ಹಿಂದೆ ಉತ್ತರ ಪ್ರದೇಶ ಚುನಾವಣೆಗಳಿಗೂ ಮುನ್ನ ಪ್ರಧಾನಿ ಮೋದಿ ಮೇ 1, 2016ರಲ್ಲಿ ರಾಜ್ಯದ ಬಲಿಯಾ ಜಿಲ್ಲೆಯ ಮೂಲಕ ಈ ಯೋಜನೆಯ ಮೊದಲ ಆವೃತ್ತಿಗೆ ಚಾಲನೆ ನೀಡಿದ್ದರು.

ಉಜ್ವಲ 2. 0 ಬಗ್ಗೆ ಮಾಹಿತಿ ನಿಡಿದ ಅಧಿಕಾರಿಯೊಬ್ಬರು, ರೂ. 800 ಕ್ಕಿಂತ ಅಧಿಕ ಬೆಲೆಯ ಸಿಲಿಂಡರ್ ಹಾಗೂ ಒಂದು ಗ್ಯಾಸ್ ಸ್ಟೋವ್ ಉಚಿತವಾಗಿ ಸಿಗುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದ್ದಾರೆ.