Wednesday, 11th December 2024

ವಕೀಲ ಉಜ್ವಲ್‌ ನಿಕಂಗೆ ಬಿಜೆಪಿ ಟಿಕೆಟ್

ಮುಂಬೈ: ಮುಂಬೈ ಉತ್ತರ ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಎರಡು ಬಾರಿಗೆ ಹಾಲಿ ಸಂಸದೆಯಾಗಿ ಕಾರ್ಯನಿರ್ವಹಿಸಿದ್ದ ಪೂನಂ ಮಹಾಜನ್‌ಗೆ ಕೊಕ್‌ ನೀಡಿ ವಕೀಲ ಉಜ್ವಲ್‌ ನಿಕಂಗೆ ಪಕ್ಷ ಮಣೆ ಹಾಕಿದೆ .

ಕಾಂಗ್ರೆಸ್‌ ಎಂದಿನ ಅಭ್ಯರ್ಥಿಯಾಗಿದ್ದ ನಟಿ ಪ್ರಿಯಾ ಸುನಿಲ್‌ ದತ್‌ರನ್ನು ಕೈಬಿಟ್ಟು ನಗರಾಧ್ಯಕ್ಷೆ ವರ್ಷಾ ಗಾಯಕ್ವಾಡ್‌ಗೆ ಟಿಕೆಟ್‌ ನೀಡಿದೆ.

ಹಾಲಿ ಸಂಸದೆ ಪೂನಂ ಮಹಾಜನ್‌ ತಮ್ಮ ತಂದೆ ಪ್ರಮೋದ್‌ ಮಹಾಜನ್‌ ಅವರಂತೆಯೇ ಸಂಸತ್ತಿನವೊಳಗೆ ಮತ್ತು ಹೊರಗೆ ತಮ್ಮ ಪ್ರಖರ ಮಾತುಗಳ ಮೂಲಕ ಪ್ರತಿಪಕ್ಷಗಳ ಟೀಕೆ ಮತ್ತು ಆರೋಪಗಳಿಗೆ ಪ್ರತ್ಯುತ್ತರ ನೀಡಿ ಗಮನ ಸೆಳೆದಿದ್ದರೂ, ಕ್ಷೇತ್ರದಲ್ಲಿ ಆಕೆಯ ಕುರಿತು ನಕಾರಾತ್ಮಕ ಅಭಿಪ್ರಾಯ ಉಂಟಾದ ಹಿನ್ನೆಲೆಯಲ್ಲಿ ಜನಪ್ರಿಯ ಅಭ್ಯರ್ಥಿಗೆ ಬಿಜೆಪಿ ಮಣೆ ಹಾಕಿದೆ.

ವಕೀಲ ಉಜ್ವಲ್‌ ನಿಕಂ ಅವರು 1993ರಿಂದ ಹಿಡಿದು 26/11 ರ ಸರಣಿ ಬಾಂಬ್‌ ಪ್ರಕರಣದಲ್ಲಿ ಉಗ್ರ ಕಸಬ್‌ಗೆ ಗಲ್ಲು ಶಿಕ್ಷೆಯಾಗುವ ತನಕ ಹಲವು ಹೈ ಪ್ರೊಫೈಲ್‌ ಕೇಸ್‌ನಲ್ಲಿ ವಾದ ಮಂಡಿಸಿದ್ದು, ಇದೀಗ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.

ಕಾಂಗ್ರೆಸ್‌ ಪಕ್ಷ ಕಳೆದ ಮೂರು ಬಾರಿಯಿಂದ ಕ್ಷೇತ್ರಕ್ಕೆ ಸ್ಪರ್ಧಿಸುತ್ತಿದ್ದ ಬಾಲಿವುಡ್‌ ನಟಿ ಸುಪ್ರಿಯಾ ಸುನಿಲ್‌ ದತ್‌ ಅವರನ್ನು ಬದಲಿಸಿ ಮುಂಬೈ ನಗರದ ಕಾಂಗ್ರೆಸ್‌ ಅಧ್ಯಕ್ಷೆ ವರ್ಷಾ ಗಾಯಕ್ವಾಡ್‌ ಅವರಿಗೆ ಮಣೆ ಹಾಕಿದೆ. ಕಾಂಗ್ರೆಸ್‌ ಪಕ್ಷ ಜಾತಿ ಅಸ್ತ್ರವನ್ನು ಬಳಸಿದ್ದು, ಪ್ರಬಲ ಮರಾಠ ಸಮುದಾಯದ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.

ಕಾಂಗ್ರೆಸ್‌ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಒಳಗಿನವರು ವರ್ಸಸ್‌ ಹೊರಗಿನವರು ಎಂಬ ಅಭಿಯಾನ ಆರಂಭಿಸಿದೆ.