Saturday, 16th November 2024

UK Kannadigaru: ಯುಕೆ ಕನ್ನಡಿಗರಿಂದ ರಾಜ್ಯೋತ್ಸವ ಸಂಭ್ರಮ, ಬೆಳಕಿನ ಹಬ್ಬದ ವೈಭವ

UK Kannadigaru
ವರದಿ: ಗಣಪತಿ ಭಟ್, ಲಂಡನ್‌

ಯುಕೆ ಕನ್ನಡಿಗರ (UK Kannadigaru) 20ನೇ ವಾರ್ಷಿಕೋತ್ಸವ, ಕರ್ನಾಟಕ ರಾಜ್ಯೋತ್ಸವ (Karnataka Rajyotsava) ಮತ್ತು ಬೆಳಕಿನ ಹಬ್ಬ ದೀಪಾವಳಿಯನ್ನು (deepavali) ಅದ್ಧೂರಿಯಾಗಿ ನವೆಂಬರ್ 10ರಂದು ಆಚರಿಸಲಾಯಿತು. ಬೆಳಗ್ಗೆ 11 ಗಂಟೆಗೆ ಸರಿಯಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

UK Kannadigaru

ಬಳಿಕ ಮಾತನಾಡಿದ ಭಾರತೀಯ ವಿದ್ಯಾ ಭವನದ ನಿರ್ದೇಶಕರಾದ ಡಾ. ಮತ್ತೂರು ನಂದಕುಮಾರ, ಕನ್ನಡಿಗರು ಯುಕೆಯ ನಿರಂತರ 20 ವರ್ಷದ ಕನ್ನಡ ಪರ ಕಾರ್ಯಕ್ರಮ ಮತ್ತು ಕನ್ನಡ ಕಲಿ ಶಿಬಿರಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಆಕ್ಸ್ ಫರ್ಡ್ ಸೆಂಟರ್ ಆಫ್ ಹಿಂದೂ ಸ್ಟಡೀಸ್ ಸಂಸ್ಥೆಯ ತಾನ್ಯಾ ಯಾಕೋಬ್ ಸೆನ್ ಮಾತನಾಡಿ, ಒಸಿಎಚ್ ಎಸ್ ನ ಹಲವಾರು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಲೇಬರ್ ಪಾರ್ಟಿಯ ಇಂಡಿಯಾ ರಿಲೇಶನ್ಸ್ ವತಿಯಿಂದ ಉದಯ್ ನಾಗರಾಜು, ಸ್ಕ್ರುಮ್ ಕನೆಕ್ಟ್ ಸಿಇಒ, ಕನ್ನಡಿಗ ಪ್ರವೀಣ್ ಕರಡಿಗುಡ್ಡಿ, ನಮಸ್ತೆ ಕಿಂಗ್ಸ್ ಟನ್ ವತಿಯಿಂದ ಮಧುರ್ ಮತ್ತು ಶ್ರದ್ಧಾ, ಒಎಫ್ ಬಿಜೆಪಿಯ ಸುರೇಶ್ ಮಂಗಳಾಗಿರಿ ಅವರು ಪಾಲ್ಗೊಂಡಿದ್ದರು.

UK Kannadigaru

ಕನ್ನಡಿಗರು ಯುಕೆ ಕಾರ್ಯಕಾರಿ ಸಮಿತಿಯ ವಿನಯ್ ರಾವ್, ರಶ್ಮಿ ಮಚಾನಿ, ಅಶ್ವಿನ್ ಶೇಷಾದ್ರಿ, ನೂರ್ಜಹಾನ್, ರಮೇಶ್ ಮರೆಗುದ್ದಿ ಮತ್ತು ರವಿ ಬಿಕ್ಕಣ್ಣವರ್ ಅವರು ಸಂಸ್ಥೆ ವತಿಯಿಂದ ಅತಿಥಿಗಳನ್ನು ಸಮ್ಮಾನಿಸಿದರು. ಬಳಿಕ ಕರ್ನಾಟಕದ ಖ್ಯಾತ ಶಾಸ್ತ್ರೀಯ ಸಂಗೀತ ಗಾಯಕಿ ಭೂಮಿಕ ಮಧುಸೂದನ ಅವರು ತಮ್ಮ ಮಧುರ ಕಂಠದಿಂದ ಭಾವಗೀತೆ, ಹಳೆ ಮತ್ತು ಹೊಸ ಕನ್ನಡ ಚಿತ್ರಗೀತೆ ಮತ್ತು ಜಾನಪದ ಗೀತೆಗಳನ್ನು ಹಾಡಿ ಯುಕೆ ಕನ್ನಡಿಗರನ್ನು ಮನೋರಂಜಿಸಿದರು.

ಈ ಬಾರಿಯ ವಿಶೇಷವೇನೆಂದರೆ ರೆಟ್ರೋ ಥೀಮ್. 70ರ ದಶಕದಿಂದ ವಿವಿಧವಾದ ಕನ್ನಡ ಚಲನಚಿತ್ರದ ಗಾಯನಕ್ಕೆ ಲಂಡನ್ ನಲ್ಲಿರುವ ಉತ್ಸಾಹಿ ಕನ್ನಡಿಗರು ರೆಟ್ರೋ ಉಡುಪನ್ನು ತೊಟ್ಟು, ಹೆಜ್ಜೆ ಹಾಕಿದರು. ಒಂದಾದ ಮೇಲೆ ಒಂದೊಂದು ಅದ್ಭುತವಾದ ಸಾಂಸ್ಕೃತಿಕ ಕಾರ್ಯಕ್ರಮವು ಸಭಿಕರನ್ನು ರೆಟ್ರೋ ಲೋಕಕ್ಕೆ ಕರೆದೊಯ್ಯಿತು.

UK Kannadigaru

ಮಧ್ಯಾಹ್ನ ಭೋಜನದ ಬಳಿಕ ಕರ್ನಾಟಕದ ಖ್ಯಾತ ಚಲನಚಿತ್ರದ ನಾಯಕಿ, ಬಿಗ್ ಬಾಸ್ ಮೂಲಕ ಪ್ರಖ್ಯಾತಿ ಹೊಂದಿರುವ ದೀಪಿಕಾ ದಾಸ್ ಅವರು ತಮ್ಮ ಮುಂಬರುವ “ಪಾರು ಪಾರ್ವತಿ” ಚಲನಚಿತ್ರದ ಬಗ್ಗೆ ಎಲ್ಲರಿಗೂ ಮಾಹಿತಿ ನೀಡಿದರು. ತದನಂತರ ಡಾಕ್ಟರ್ ರಾಜಕುಮಾರ್ ಅವರ ಪ್ರಖ್ಯಾತ ಭಕ್ತ ಪ್ರಹ್ಲಾದ ಚಿತ್ರದ ಸನ್ನಿವೇಶವನ್ನು ಡ್ರಾಮಾ ಮೂಲಕ ಪುಟಾಣಿ ಇಷ್ಟ ಮತ್ತು ಇಶಾನ್ ಅವರು ಅತ್ಯದ್ಭುತವಾಗಿ ಪ್ರಸ್ತುತಪಡಿಸಿದರು.

ಕನ್ನಡಿಗರು ಯುಕೆಯ ಸದಸ್ಯರಾದ ಶ್ವೇತಾ ಶೆಟ್ಟಿ, ಶ್ವೇತಾ ಮೂರ್ತಿ, ಮಾನಸ, ಪೃಥ್ವಿ, ವಿಂದ್ಯ ಹೆಗಡೆ ಮತ್ತು ಅಕ್ಷಯ್ ಜೊತೆಗೂಡಿ ಅತ್ಯುತ್ತಮವಾದ ರೆಟ್ರೋ ಶೈಲಿಯ ಗಿಲಿ ಗಿಲಿ ಗಿಲಕ್ಕು, ನನ್ನಂತ ಹೆಣ್ಣು ಯಾರಿಲ್ಲ ಹೀಗೆ ಬೇರೆ ಬೇರೆ ಹಳೆ ಹಾಡುಗಳಿಗೆ ಹೆಜ್ಜೆ ಹಾಕಿದರು.

ದೂರದೂರ ಪ್ರದೇಶಗಳಿಂದ ಬಂದಿದ್ದ ನೂರಾರು ಕನ್ನಡಿಗರು ಕಾರ್ಯಕ್ರಮದಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ಕಾರ್ಡಿಫ್ ನ ಡಾ. ಗಿರೀಶ್ ಮತ್ತು ಅಹನಾ ಅವರಿಂದ ಗಾಯನ, ಕೇಂಬ್ರಿಜ್ ನ ಭಾರ್ಗವಿ ಆನಂದ್ ಅವರಿಂದ ಕಂಸಾಲೆ ನೃತ್ಯ, ಆದರ್ಶ ದಂಪತಿಗಳು, ಸ್ಥಳೀಯ ಪ್ರತಿಭಾವಂತ ಮಕ್ಕಳಾದ ಮೇಧಾ, ದೃತಿ, ಇಂಚರ ಮತ್ತು ಇಶಾನ್ ಅವರಿಂದ ಕವಿರತ್ನ ಕಾಳಿದಾಸ ಸಿನಿಮಾದ ಮಾಣಿಕ್ಯ ವೀಣಾ ಗೀತೆಗೆ ಅಭಿನಯ ಹೀಗೆ ಅನೇಕ ಆಕರ್ಷಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಾಯಿತು.

ಕಾರ್ಡಿಫ್ ನ 12 ವರ್ಷದ ಅಹನಾ ಮಹಿಷಾಸುರ ಮರ್ದಿನಿಯ ಭರತನಾಟ್ಯ ಮತ್ತು ಹಾಡುಗಳ ಮೂಲಕ ಎಲ್ಲರ ಮನ ಸೆಳೆದರೆ, ಬಸ್ಸಿಲ್ಡನ್ ನಿಂದ ಆಗಮಿಸಿದ್ದ ಕನ್ನಡಿಗರ ಗುಂಪು ಕನ್ನಡ ನಾಡಿನ ವೀರರ ಮಣಿಯ ಹಾಡಿಗೆ ಅತ್ಯುತ್ತಮವಾದ ನೃತ್ಯ ಪ್ರದರ್ಶನವನ್ನು ನೀಡಿದರು.

UK Kannadigaru

ಹಾಗೆಯೇ ಕೇಂಬ್ರಿಜ್ ನಿಂದ ಅತ್ಯುತ್ತಮವಾದ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಾಗಿತ್ತು. ರೆಟ್ರೋ ಫ್ಯಾಷನ್ ಶೋ ಅಂತೂ ರಾಜ್ಯೋತ್ಸವದ ಹೈಲೈಟ್ ಆಗಿತ್ತು. ವೀಣಾ ವಸಂತ ಅವರ ನಿರ್ದೇಶನದಲ್ಲಿ ವಿಧವಿಧವಾದ ರೆಟ್ರೋ ಪೋಷಾಕುಗಳಿಂದ ಹಳೆಯ ಕನ್ನಡ ಚಲನ ಚಿತ್ರದ ತುಣುಕುಗಳಿಗೆ ಕನ್ನಡಿಗರು ಯುಕೆಯ ಸದಸ್ಯರು ರಾಂಪ್ ವಾಕ್ ಅಷ್ಟೇ ಅಲ್ಲ ಅಭಿನಯ ಕೂಡ ಮಾಡಿದರು.

Kannadigaru Dubai: ದುಬೈ ಕನ್ನಡಿಗರಿಂದ ರಾಜ್ಯೋತ್ಸವ ಸಂಭ್ರಮ, ಕನ್ನಡ ರತ್ನ ಪ್ರಶಸ್ತಿ ಪ್ರದಾನ

ಸುಮಾರು ಮುನ್ನೂರಕ್ಕೂ ಹೆಚ್ಚು ಕನ್ನಡಿಗರು ರಾಜ್ಯೋತ್ಸವ ಆಚರಣೆಯಲ್ಲಿ ಭಾಗವಹಿಸಿದ್ದರು. ಕೊನೆಯಲ್ಲಿ ಭೂಮಿಕಾ ಅವರ ರೆಟ್ರೋ ಮ್ಯೂಸಿಕಲ್ ಸಂಜೆಗೆ ಎಲ್ಲರೂ ಹರ್ಷೋದ್ಘಾರದಿಂದ ಕುಣಿದು ಕುಪ್ಪಳಿಸಿದರು.

ಶ್ರೀರಕ್ಷಾ ಅವರಿಂದ ಗಣೇಶನ ಭಕ್ತಿಗೀತೆ ಮತ್ತು ಕನ್ನಡಿಗರು ಯುಕೆ ತಂಡದಿಂದ ನಾಡಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕನ್ನಡಿಗರು ಯುಕೆಯ ಅಧ್ಯಕ್ಷರಾದ ಗಣಪತಿ ಭಟ್ ಎಲ್ಲರನ್ನು ಸ್ವಾಗತಿಸಿದರು. ಕನ್ನಡಿಗರು ಯುಕೆ ಕಾರ್ಯಕಾರಿ ಸಮಿತಿಯ ಸದಸ್ಯರಾದ ರಶ್ಮಿ ಮತ್ತು ನೂರ್ಜಹಾನ್ ಅವರು ರೆಟ್ರೋ ಥೀಮ್ ಅನ್ನು ಪ್ರಸ್ತುತಪಡಿಸಿದ್ದರು. ಸೀತಾರಾಮ್, ದೀಪಾ, ಸ್ಮಿತಾ, ಸುಮನಾ ಮತ್ತು ಆಶಾ ಅವರು ಕಾರ್ಯಕ್ರಮ ನಿರೂಪಿಸಿದರು.