Wednesday, 18th December 2024

Uniform Civil Code: ಉತ್ತರಾಖಂಡದಲ್ಲಿ ಮುಂದಿನ ತಿಂಗಳು ಏಕರೂಪ ನಾಗರಿಕ ಸಂಹಿತೆ ಜಾರಿ; ಐತಿಹಾಸಿಕ ಹೆಜ್ಜೆ ಎಂದ ಸಿಎಂ ಪುಷ್ಕರ್ ಸಿಂಗ್

Uniform Civil Code

ಡೆಹ್ರಾಡೂನ್‌: ಮುಂದಿನ 15 ದಿನಗಳಲ್ಲಿ ಉತ್ತರಾಖಂಡ (Uttarakhand)ದಲ್ಲಿ ಏಕರೂಪ ನಾಗರಿಕ ಸಂಹಿತೆ (Uniform Civil Code)ಯನ್ನು ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಬುಧವಾರ (ಡಿ. 18) ಪ್ರಕಟಿಸಿದ್ದಾರೆ. ಈ ಮೂಲಕ ಸ್ವಾತಂತ್ರ್ಯ ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಅಳವಡಿಸಿಕೊಂಡ ದೇಶದ ಮೊದಲ ರಾಜ್ಯ ಉತ್ತರಾಖಂಡ ಎನಿಸಿಕೊಳ್ಳಲಿದೆ.

ಆನ್‌ಲೈನ್‌ ಮೂಲಕ ನೋಂದಣಿ ಮತ್ತಿತರ ಸೇವೆಗಳನ್ನು ಒದಗಿಸಲಾಗುತ್ತದೆ ಎಂದು ಬಿಜೆಪಿ ನೇತೃತ್ವದ ಸರ್ಕಾರ ತಿಳಿಸಿದ್ದು, ಈ ನಿಟ್ಟಿನಲ್ಲಿ ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಶನ್ ಸಹ ಸಿದ್ಧಪಡಿಸಿದೆ.

ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದೇನು?

ʼʼಉತ್ತರಾಖಂಡದಲ್ಲಿ 2025ರ ಜನವರಿಯಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರಲಿದೆ. ಉತ್ತರಾಖಂಡವನ್ನು ನ್ಯಾಯಯುತ ಮತ್ತು ನ್ಯಾಯಸಮ್ಮತವಾಗಿಸುವ ನಿಟ್ಟಿನಲ್ಲಿ ಐತಿಹಾಸಿಕ ಹೆಜ್ಜೆ ಇಟ್ಟಿರುವ ನಾವು 2025ರ ಜನವರಿಯಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ನಿರ್ಧರಿಸಿದ್ದೇವೆ. ಯುಐಐಡಿಬಿ ಸಭೆಯಲ್ಲಿ ಈ ನಿರ್ಧಾರದ ಬಗ್ಗೆ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ” ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

“ಒಂದೆಡೆ ಈ ಕ್ರಮವು ಸಾಮಾಜಿಕ ಸಮಾನತೆ ಮತ್ತು ಏಕತೆಯನ್ನು ಬಲಪಡಿಸುವ ದಿಕ್ಕಿನಲ್ಲಿ ಒಂದು ಮೈಲಿಗಲ್ಲು ಎಂದೆನಿಸಿದರೆ ಮತ್ತೊಂದೆಡೆ ನಮ್ಮ ರಾಜ್ಯವು ಮಾರ್ಗದರ್ಶಕವಾಗಿ ಹೊರ ಹೊಮ್ಮಲಿದೆ” ಎಂದು ತಿಳಿಸಿದ್ದಾರೆ.

ಭಾರತದ ಸಂವಿಧಾನದ 201ನೇ ವಿಧಿಯ ಅಡಿಯಲ್ಲಿ ಉತ್ತರಾಖಂಡದ ಏಕರೂಪ ನಾಗರಿಕ ಸಂಹಿತೆ 2024ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾ. 11ರಂದು ಅಂಕಿತ ಹಾಕಿದ್ದರು. ವಿಧಾನಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸುವ ಮೊದಲು, ʼʼಯುಸಿಸಿ ಬಹುಪತ್ನಿತ್ವ, ಹಲಾಲ್‌, ಇಡತ್ ಮತ್ತು ತಲಾಖ್ ಅನ್ನು ಸಂಪೂರ್ಣವಾಗಿ ನಿಷೇಧಿಸುತ್ತದೆ. ಯಾಕೆಂದರೆ ಮದುವೆ ಮತ್ತು ವಿಚ್ಛೇದನಕ್ಕೆ ಸಂಬಂಧಿಸಿದಂತೆ ಪುರುಷರು ಮತ್ತು ಮಹಿಳೆಯರು ಇಬ್ಬರೂ ಒಂದೇ ಹಕ್ಕುಗಳನ್ನು ಹೊಂದಲಿದ್ದಾರೆʼʼ ಎಂದು ಧಾಮಿ ಹೇಳಿದ್ದರು.

ʼʼಏಕರೂಪ ನಾಗರಿಕ ಸಂಹಿತೆಯು ಮಹಿಳೆಯರ ವಿರುದ್ಧ ಅನ್ಯಾಯ ಮತ್ತು ತಪ್ಪು ಕಾರ್ಯಗಳನ್ನು ನಿರ್ಮೂಲನೆ ಮಾಡಲು ಸಹಾಯ ಮಾಡುತ್ತದೆ. ‘ಮಾತೃಶಕ್ತಿ’ ಮೇಲಿನ ದೌರ್ಜನ್ಯವನ್ನು ನಿಲ್ಲಿಸುವ ಸಮಯ ಬಂದಿದೆ. ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಮೇಲಿನ ತಾರತಮ್ಯ ನಿಲ್ಲಬೇಕುʼʼ ಎಂದು ಅವರು ತಿಳಿಸಿದ್ದರು.

ಏಕರೂಪ ನಾಗರಿಕ ಸಂಹಿತೆ ಎಂದರೇನು?

ಮದುವೆ, ವಿಚ್ಛೇದನ, ದತ್ತು ಸ್ವೀಕಾರ ಮತ್ತು ಉತ್ತರಾಧಿಕಾರ ಸೇರಿದಂತೆ ಭಾರತದ ಎಲ್ಲ ನಾಗರಿಕರಿಗೆ ಅನ್ವಯವಾಗುವ, ಅವರ ಧರ್ಮವನ್ನು ಲೆಕ್ಕಿಸದೆ ವೈಯಕ್ತಿಕ ವಿಷಯಗಳನ್ನು ನಿಯಂತ್ರಿಸುವ ಕಾನೂನುಗಳ ಒಂದು ಗುಂಪಾಗಿ ಏಕರೂಪ ನಾಗರಿಕ ಸಂಹಿತೆ ಎಂದು ಕರೆಯಲಾಗುತ್ತದೆ. ಈಗ ಅಸ್ತಿತ್ವದಲ್ಲಿರುವ ವೈವಿಧ್ಯಮಯ ವೈಯಕ್ತಿಕ ಕಾನೂನುಗಳನ್ನು ಬದಲಿಸುವ ಗುರಿ ಇದರ ಹಿಂದಿದೆ.

ಯುಸಿಸಿ ಮಸೂದೆಯು ಮದುವೆ ಮತ್ತು ವಿಚ್ಛೇದನವನ್ನು ನೋಂದಾಯಿಸುವುದನ್ನು ಕಡ್ಡಾಯಗೊಳಿಸಿದೆ. ಇಲ್ಲದಿದ್ದರೆ ದಂಪತಿ ಎಲ್ಲ ಸರ್ಕಾರಿ ಸೌಲಭ್ಯಗಳ ಪ್ರಯೋಜನಗಳಿಂದ ವಂಚಿತರಾಗಲಿದ್ದಾರೆ. ವಿಚ್ಛೇದನ ಅಥವಾ ಕೌಟುಂಬಿಕ ವಿವಾದದ ಸಂದರ್ಭದಲ್ಲಿ 5 ವರ್ಷದವರೆಗಿನ ಮಗು ಕಸ್ಟಡಿ ತಾಯಿಯ ಬಳಿಯೇ ಇರುತ್ತದೆ.

ಈ ಸುದ್ದಿಯನ್ನೂ ಓದಿ: PM Narendra Modi: ಶೀಘ್ರದಲ್ಲೇ ಒಂದು ದೇಶ, ಒಂದು ಎಲೆಕ್ಷನ್‌ ಮತ್ತು ಏಕರೂಪ ನಾಗರಿಕ ಸಂಹಿತೆ ಜಾರಿ-ಪ್ರಧಾನಿ ಮೋದಿ ಘೋಷಣೆ